ಬೆಂಗಳೂರು: ನಾಳೆಯಿಂದ ಸದನದಲ್ಲಿ ಕದನ ಕಾವೇರಲಿದೆ. ಆಡಳಿತಾರೂಢ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.
ಆದ್ಯತೆಯ ಮೇರೆಗೆ ನಾಲ್ಕು ಅಸ್ತ್ರ ಹೂಡಲು ವಿರೋಧ ಪಕ್ಷ ಕಾಂಗ್ರೆಸ್ ಸಿದ್ಧವಾಗಿದೆ. ಮಳೆ, ನೆರೆ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ವಿಫಲತೆಯ ವಿರುದ್ಧ ಎರಡು ದಿನ ಸರ್ಕಾರಕ್ಕೆ ಚಾಟಿ ಬೀಸಲು ಸಜ್ಜಾಗಿದೆ. ನಾಳೆ ನೆರೆ ಪರಿಸ್ಥಿತಿಯ ಮೇಲೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲಾಗುವುದು.
ನಂತರ ಭ್ರಷ್ಟಾಚಾರ, 40% ಕಮಿಷನ್ ಅಸ್ತ್ರ ಪ್ರಯೋಗಿಸಲಾಗುವುದು. ಆನಂತರ ಕಾನೂನು ಸುವ್ಯವಸ್ಥೆ ಲೋಪಗಳ ಬಗ್ಗೆ ಕಾಂಗ್ರೆಸ್ ದಾಳಿ ಮಾಡಲು ಸಜ್ಜಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರ ಹತ್ಯೆಯ ಬಗ್ಗೆ ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಂಡಿದೆ. ಸದನದಲ್ಲಿ ಪಿಎಸ್ಐ ಹಗರಣವನ್ನು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಲಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ. ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಟ್ಟಿ ಮಾಡಿಕೊಂಡಿದೆ. ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸಿದೆ.