ಭಾರತದಲ್ಲಿ ಶೀಘ್ರದಲ್ಲೇ ಇ-ಹೆದ್ದಾರಿಗಳನ್ನು ಪರಿಚಯಿಸಲಾಗುವುದು. ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ, ಇದು ಹೆವಿ ಡ್ಯೂಟಿ ಟ್ರಕ್ ಗಳು ಮತ್ತು ಬಸ್ ಗಳ ಚಾರ್ಜ್‌ಗೆ ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್(ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗಡ್ಕರಿ, ವಿದ್ಯುತ್ ನಲ್ಲಿ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಬಯಸಿದೆ ಎಂದು ಪುನರುಚ್ಚರಿಸಿದರು.
ವಿದ್ಯುತ್ ಚಲನಶೀಲತೆಗಾಗಿ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ಕಾರ್ಯವಿಧಾನಗಳನ್ನು ಸರ್ಕಾರವು ಬಲವಾಗಿ ಪ್ರೋತ್ಸಾಹಿಸುತ್ತಿದೆ. ನಾವು ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದೇವೆ, ಇದು ಸೌರ ಶಕ್ತಿಯಿಂದ ಚಾಲಿತವಾಗಲಿದೆ. ಚಾಲನೆಯಲ್ಲಿರುವಾಗ ಭಾರೀ ಟ್ರಕ್ ಗಳು ಮತ್ತು ಬಸ್ ಗಳನ್ನು ಚಾರ್ಜ್ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಎಲೆಕ್ಟ್ರಿಕ್ ಹೆದ್ದಾರಿಯು ಸಾಮಾನ್ಯವಾಗಿ ರಸ್ತೆಯನ್ನು ಸೂಚಿಸುತ್ತದೆ, ಇದು ಓವರ್ ಹೆಡ್ ಪವರ್ ಲೈನ್ ಗಳನ್ನು ಒಳಗೊಂಡಂತೆ ಅದರ ಮೇಲೆ ಪ್ರಯಾಣಿಸುವ ವಾಹನಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ. ಟೋಲ್ ಪ್ಲಾಜಾಗಳನ್ನು ಸೌರಶಕ್ತಿಯಿಂದ ಚಾಲಿತಗೊಳಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.