ಬೆಂಗಳೂರು; ರಾಜಕಾಲುವೆ, ಕೆರೆ ಒತ್ತುವರಿ ತೆರವಿಗೆ ಯಾವುದೇ ನೋಟೀಸ್ ಕೊಡುವ ಅಗತ್ಯವಿಲ್ಲ, ನೋಟಿಸ್ ಇಲ್ಲದೆಯೂ ಒತ್ತುವರಿ ತೆರವು ಮಾಡಬಹುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನ ಮಹಾದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಮಾತನಾಡಿದ ಸಚಿವರು, ನೋಟೀಸ್ ನೀಡದೆಯೇ ಒತ್ತುವರಿ ತೆರವು ಮಾಡಬಹುದು. ಯಾರೇ ಒತ್ತುವರಿ ಮಾಡಿದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದರು.
ಕೆರೆ, ರಾಜಕಾಲುವೆ ಒತ್ತುವರಿ ಮಾಡಿದ್ದವರು ಬಡವರು, ಶ್ರೀಮಂತರು ಎಂದು ನೋಡುವುದಿಲ್ಲ. ಯಾವುದೇ ತಾರತಮ್ಯವಿಲ್ಲದೇ ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವು ಮಾಡಲಾಗುತ್ತದೆ. ಒಂದು ವಾರ ಒತ್ತುವರಿ ತೆರವು ಮಾಡಿ ಸುಮ್ಮನಿದ್ದರೆ ಆಗದು, ತೆರವು ಕಾರ್ಯ ನಿರಂತರವಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ರೈನ್ ಬೋ ಡ್ರೈವ್ ಬಡಾವಣೆಯಲ್ಲಿ ಮಳೆ ನೀರು ನಿಂತು ಪ್ರವಾಹ ಪರಿಸ್ಥಿತಿಯುಂಟಾಗಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ 13 ವಿಲ್ಲಾ ಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು, ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.