ತಿಳಿದೋ ತಿಳಿಯದೆಯೋ ಮಕ್ಕಳಲ್ಲಿ ಕೆಲವು ಭಯಗಳು, ನಿರಾಸಕ್ತಿ ಬೆಳೆದು ಬಿಟ್ಟಿರುತ್ತದೆ. ಭಯ ಉಂಟಾದ ಸಂದರ್ಭಗಳು ಎದುರಾದಾಗ ಹೆದರಿಕೆಯಿಂದ ಇರುವವರು ಒಂದಷ್ಟು ಜನರಾದರೆ, ತಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ದುಃಖಿತರಾಗುವ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ.
ಊಟ ಸರಿಯಾಗಿ ಮಾಡದಿದ್ದರೆ ಗೊಗ್ಗಯ್ಯ ಬಂದು ಕರೆದುಕೊಂಡು ಹೋಗುತ್ತಾನೆ. ತುಂಟತನ ಮಾಡಿದರೆ ಪೊಲೀಸರು ಕರೆದುಕೊಂಡು ಹೋಗುತ್ತಾರೆ ಎಂದು ಸಾಕಷ್ಟು ಜನರು ಮಕ್ಕಳನ್ನು ಹೆದರಿಸುತ್ತಾರೆ. ಆ ಕ್ಷಣದಲ್ಲಿನ ಮಾತು ಕೇಳಲಿ ಎಂದು ಆ ರೀತಿ ಮಾಡಿದರೂ ಬೆಳೆಯುವ ಮಕ್ಕಳಲ್ಲಿ ಈ ರೀತಿಯ ಭಯ ಹಿಂಬಾಲಿಸುತ್ತಲೇ ಇರುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಆದ್ದರಿಂದ ಆಹಾರ ತಿನ್ನಿಸುವಾಗ, ಮಕ್ಕಳಿಗೆ ಬೇರೆ ಕೆಲಸ ಮಾಡಿಸುವಾಗ ಉತ್ಸಾಹ ಉಂಟು ಮಾಡುವ ಸಕಾರಾತ್ಮಕ ಪದಗಳನ್ನು ಬಳಸಬೇಕು. ಹಾಲು ಕುಡಿದರೆ ಶಕ್ತಿ ಬರುತ್ತದೆ. ಬೇಗ ಹೋಂ ವರ್ಕ್ ಮಾಡಿದರೆ ಹೆಚ್ಚು ಕಾಲ ಆಟ ಆಡಬಹುದು ಎಂದು ಹೇಳಬೇಕು.
ಪ್ರತಿಯೊಬ್ಬರಿಗೂ ಕೆಲವು ಇಷ್ಟಾನಿಷ್ಟಗಳು ಇರುತ್ತವೆ. ಅದು ರುಚಿ, ಅಭಿರುಚಿ ಏನೇ ಆಗಿರಬಹುದು. ಯಾವುದಾದರ ಬಗ್ಗೆ ಹಠ ಮಾಡಿದರೆ ಬಲವಂತ ಮಾಡದಿರಿ. ಆ ಕೆಲಸ ಮಾಡದಿರಲು ಇರುವ ಕಾರಣಗಳನ್ನು ಕೇಳಿ ತಿಳಿಯಿರಿ. ನಿಜಕ್ಕೂ ಅವು ಸರಿಯಾಗಿ ಇರುವುದಾದರೆ ಅದಕ್ಕೆ ಬದಲಿ ಪರಿಹಾರ ಆಲೋಚಿಸಿ. ಇಲ್ಲ ಸಲ್ಲದ ಊಹೆಗಳನ್ನು ಭಯಗಳನ್ನು ಮುಂದಿಟ್ಟು ಅವುಗಳನ್ನು ಪೂರ್ಣ ಗೊಳಿಸುವ ಪ್ರಯತ್ನ ಮಾಡದಿರಿ.
ನಿಮಿಷ ಬಿಡುವಿಲ್ಲದ ಗಡಿಬಿಡಿ ಬದುಕಿನಿಂದ ದಣಿಯುವ ತಂದೆ-ತಾಯಿಗೆ ಮಕ್ಕಳ ಇಷ್ಟಾನಿಷ್ಟ ಅರಿಯುವ, ಪೂರೈಸುವ ವ್ಯವಧಾನ ಇರುವುದಿಲ್ಲ. ಇದು ಅವರಲ್ಲಿ ನಿರಾಸಕ್ತಿ ಭಯಕ್ಕೆ ಕಾರಣವಾಗುತ್ತದೆ.
ಹಾಗಾಗಿ ಪ್ರತಿದಿನ ಸ್ವಲ್ಪ ಸಮಯವಾದರೂ ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಅವರು ಇಷ್ಟಪಟ್ಟು ತಿನ್ನುವ ಆಹಾರ ಪದಾರ್ಥಗಳನ್ನು ಮಾಡಬೇಕು. ಅವರ ಮನದಲ್ಲಿರುವ ಭಾವೋದ್ವೇಗವನ್ನು ಆರಾಮ ಹಾಗೂ ಧೈರ್ಯವಾಗಿ ಹಂಚಿಕೊಳ್ಳುವ ವಾತಾವರಣ ಕಲ್ಪಿಸಿಕೊಡಬೇಕು.