ಸಂಗಾತಿ ಮೊದಲಿನಂತಿಲ್ಲ. ಇಬ್ಬರ ನಡುವಿನ ಅಂತರ ಜಾಸ್ತಿಯಾಗ್ತಿದೆ. ಶಾರೀರಿಕ ಸಂಬಂಧ, ರೋಮ್ಯಾನ್ಸ್ ದೂರವಾಗ್ತಿದೆ ಎಂದು ಕೊರಗುವವರಿದ್ದಾರೆ. ಅವರ ತಲೆಯಲ್ಲಿ ಮೊದಲು ಓಡುವ ಪ್ರಶ್ನೆ ಸಂಗಾತಿಯ ಇನ್ನೊಂದು ಸಂಬಂಧ. ತನ್ನನ್ನು ಬಿಟ್ಟು ಸಂಗಾತಿ ಬೇರೆ ಸಂಬಂಧ ನೋಡಿಕೊಂಡ್ರಾ ಎಂಬ ಸಂಶಯ ಮನಸ್ಸಿನಲ್ಲಿ ಮನೆ ಮಾಡುತ್ತದೆ. ಈ ಸಂಶಯ ಬರುವ ಮೊದಲು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೂಕ್ತ.
ಕೇವಲ ಇನ್ನೊಂದು ಸಂಬಂಧ ಮಾತ್ರ ಸಂಗಾತಿ ನಿಮ್ಮಿಂದ ದೂರವಾಗಲು ಕಾರಣವಾಗುವುದಿಲ್ಲ. ಕಾಲದ ಜೊತೆ ಓಡುವ ಈ ಜೀವನಶೈಲಿ ಕೂಡ ಬಹುಮುಖ್ಯ ಕಾರಣವಾಗುತ್ತದೆ.
ಸಂಗಾತಿ ನಿಮ್ಮ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮೊದಲಿನಂತೆ ಆಸಕ್ತಿ ತೋರಿಸುತ್ತಿಲ್ಲವಾದಲ್ಲಿ ಕಾರಣ ತಿಳಿದುಕೊಳ್ಳಿ. ಒತ್ತಡ ಕೂಡ ಶಾರೀರಿಕ ಸಂಬಂಧದಿಂದ ದೂರವಾಗಲು ಕಾರಣವಾಗುತ್ತದೆ. ಮೊದಲು ಸಂಗಾತಿ ಜೊತೆ ಕುಳಿತು ಮಾತನಾಡಿ. ಅವರ ಒತ್ತಡಕ್ಕೆ ಕಾರಣ ತಿಳಿದುಕೊಂಡು ಪರಿಹಾರಕ್ಕೆ ಪ್ರಯತ್ನಿಸಿ.
ಆರೋಗ್ಯವಂತ ವ್ಯಕ್ತಿಗೆ 8 ತಾಸಿನ ನಿದ್ರೆಯ ಅಗತ್ಯವಿದೆ. ಸರಿಯಾಗಿ ನಿದ್ರೆ ಬರದಿದ್ದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಕಿರಿಕಿರಿಯುಂಟು ಮಾಡುತ್ತಿರುತ್ತದೆ. ಶಾರೀರಿಕ ಸಂಬಂಧ ಬೆಳೆಸಲು ಅಗತ್ಯವಿರುವ ಮೂಡ್ ಹಾಳುಮಾಡುವ ಜೊತೆಗೆ ನಿಶ್ಯಕ್ತಿಯುಂಟು ಮಾಡುತ್ತದೆ.
ವಾದ-ವಿವಾದ, ಜಗಳ-ಗಲಾಟೆ ಕೂಡ ಶಾರೀರಿಕ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ.
ಬೇರೆ ಕಾರಣಗಳಿಗೆ ನೀವು ತೆಗೆದುಕೊಳ್ಳುವ ಮಾತ್ರೆ-ಔಷಧಿ ಕೂಡ ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಮಾತ್ರೆಗಳು ಸೆಕ್ಸ್ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಾತ್ರೆ ಸೇವನೆಗೆ ಮೊದಲು ಅದ್ರ ಅಡ್ಡ ಪರಿಣಾಮಗಳನ್ನು ತಿಳಿದುಕೊಳ್ಳಿ.
ತಿನ್ನುವ ಆಹಾರ ಹಾಗೂ ಸೇವಿಸುವ ಸಮಯದಲ್ಲಿನ ವ್ಯತ್ಯಾಸವೂ ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಡಿಮೆ ಮಾಡುತ್ತದೆ. ಕೆಲವೊಂದು ಆಹಾರ ಸೆಕ್ಸ್ ಲೈಫ್ ಸುಖಕರವಾಗಿರಲು ನೆರವಾದ್ರೆ ಮತ್ತೆ ಕೆಲವು ಲೈಂಗಿಕ ಜೀವನಕ್ಕೆ ಅಡ್ಡಗಾಲುಂಟು ಮಾಡುತ್ತವೆ.
ಅತಿ ಹೆಚ್ಚು ಆಹಾರ ಸೇವನೆ, ಸದಾ ಮೊಬೈಲ್, ಲ್ಯಾಪ್ ಟಾಪ್, ಟಿವಿ ಬಳಕೆಯೂ ಇಬ್ಬರ ನಡುವೆ ಅಂತರ ಜಾಸ್ತಿ ಮಾಡುತ್ತದೆ.