ಕೊರೊನಾದಿಂದ ಇಡೀ ದೇಶದ ಜನತೆ ಬೇಸತ್ತು ಹೋಗಿದ್ದಾರೆ. ಇದ್ಯಾವಾಗ ತೊಲಗುತ್ತಪ್ಪ ಅಂತ ಅಂದುಕೊಳ್ತಾ ಇದ್ದಾರೆ. ಸದ್ಯ ಕೊರೊನಾ ಹಾವಳಿ ಕಡಿಮೆಯಾಗಿದೆ. ಆದರೆ ಇದೀಗ ಸದ್ದಿಲ್ಲದೆ ಇಲಿ ಜ್ವರದ ಹಾವಳಿ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಇಲಿ ಜ್ವರದ ಪ್ರಕರಣ ಹೆಚ್ಚಾಗುತ್ತಿವೆಯಂತೆ.
ಹೌದು, ಇಲಿ ಜ್ವರದ 309 ಪ್ರಕರಣಗಳ ದಾಖಲಾಗಿವೆ. ಮಂಗಳೂರಿನಲ್ಲಿ 194, ಬಂಟ್ವಾಳದಲ್ಲಿ 37, ಬೆಳ್ತಂಗಡಿಯಲ್ಲಿ 52, ಪುತ್ತೂರಿನಲ್ಲಿ 19 ಹಾಗೂ ಸುಳ್ಯದಲ್ಲಿ 7 ಪ್ರಕರಣ ಪತ್ತೆಯಾಗಿವೆ. ಇಲಿ ಕಚ್ಚಿ ಮಾತ್ರ ಜ್ವರ ಬರಬೇಕು, ಅಥವಾ ಅಲ್ಲಿಂದಲೇ ಸೋಂಕು ಹರಡುವುದು ಅಂತೇನಿಲ್ಲ. ಅದರ ಎಂಜಲು, ಅದರ ಮೂತ್ರ-ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ಸಾಕು ನಿಮಗೆ ಸೋಂಕು ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ಕೇವಲ ಇಲಿಗಳು ಮಾತ್ರವಲ್ಲ, ಇಲಿಗಳನ್ನು ಹಿಡಿಯುವ ಬೆಕ್ಕುಗಳು ಮತ್ತು ನಾಯಿಗಳು ಕೂಡ ನಿಮಗೆ ರೋಗ ತರಬಹುದು. ಇನ್ನು ಯಾವುದೇ ವ್ಯಕ್ತಿಗೆ ಇಲಿಯ ಮೂಲಕ ಜ್ವರ ಬಂದಿದ್ದರೆ, ಅದು ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ ಆಗುವುದಿಲ್ಲವಂತೆ. ಇನ್ನು ಈ ಸೋಂಕು ಹರಡಿದ್ದರೆ, ಮೈ ಕೈ ನೋವು, ಜ್ವರ, ತಲೆನೋವು, ವಾಕರಿಕೆ, ಸೋಂಕು ಬಂದ ಎರಡು ದಿನದಲ್ಲಿ ಮೈಮೇಲೆ ಗುಳ್ಳೆಗಳು, ಕೀಲು ನೋವು ಹೀಗೆ ಅನೇಕ ಲಕ್ಷಣ ಕಾಣಿಸುತ್ತವೆಯಂತೆ. ಹಾಗಾಗಿ ಈ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.