ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಯೊಬ್ಬರು ಐವರು ಪೊಲೀಸ್ ಸಿಬ್ಬಂದಿಯನ್ನು ಎರಡು ಗಂಟೆಗಳ ಕಾಲ ಲಾಕಪ್ ನಲ್ಲಿರಿಸಿದ್ದ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬಿಹಾರದ ನವಾಡ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಗೌರವ್ ಮಂಗಳಾ, ಇಬ್ಬರು ಸಬ್ ಇನ್ಸ್ಪೆಕ್ಟರ್ ಹಾಗೂ ಮೂವರು ಸಹಾಯಕ ಸಬ್ ಇನ್ಸ್ಪೆಕ್ಟರ್ ರನ್ನು ಲಾಕಪ್ ನಲ್ಲಿ ಇರಿಸಿದ್ದಾರೆ.
ಇವರುಗಳು ಕರ್ತವ್ಯ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಈ ಐದು ಮಂದಿ ಲಾಕಪ್ ನಲ್ಲಿ ಮಾತನಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಜ್ಯದ ಇತರೆ ಪೊಲೀಸ್ ಸಿಬ್ಬಂದಿ ಘಟನೆಯ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ ಜಿಲ್ಲಾ ರಕ್ಷಣಾಧಿಕಾರಿ ಮಾತ್ರ ಈ ವಿಚಾರವನ್ನು ತಳ್ಳಿ ಹಾಕಿದ್ದು ಹಾಗೇನು ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ಮೂಲಗಳ ಪ್ರಕಾರ ಘಟನೆಯನ್ನು ಮುಚ್ಚಿ ಹಾಕಲು ಹಿರಿಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.