ಬೆಂಗಳೂರು: ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದ ಹೈಕೋರ್ಟ್ ಆದೇಶದ ಬೆನ್ನಲ್ಲೇ ಇದೀಗ ಎಡಿಜಿಪಿ ಸೀಮಂತ ಕುಮಾರ್ ಸಿಂಗ್ ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಎಸಿಬಿ ಕಡತಗಳನ್ನು ಸೆಪ್ಟೆಂಬರ್ 12ರ ಒಳಗೆ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಎಸಿಬಿ ಪೊಲೀಸ್ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿದ್ದು, ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸಿಬಿ ಕಚೇರಿಗಳಲ್ಲಿ 75 ಇನ್ಸ್ ಪೆಕ್ಟರ್, 45 ಡಿವೈ ಎಸ್ ಪಿ, 9 ಎಸ್ ಪಿ ದರ್ಜೆಯ ಅಧಿಕಾರಿಗಳು ಇದ್ದು ಇಷ್ಟೊಂದು ಅಧಿಕಾರಿಗಳ ಸ್ಥಳ ತೋರಿಸುವುದು ಇದೀಗ ಗೃಹ ಇಲಾಖೆಗೆ ಸವಾಲಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಇನ್ಸ್ ಪೆಕ್ಟರ್ ಹಾಗೂ ಡಿವೈ ಎಸ್ ಪಿ ಹುದ್ದೆಗಳು ಈಗಾಗಲೇ ಭರ್ತಿಯಾಗಿದ್ದು, ಪೊಲೀಸ್ ಇಲಾಖೆ ಇತರೆ ವಿಭಾಗಗಳಲ್ಲಿ ಸಾಕಷ್ಟು ಅಧಿಕಾರಿಗಳು ಇದ್ದಾರೆ. ಹಾಗಾಗಿ ಎಸಿಬಿಯಲ್ಲಿದ್ದ ಅಧಿಕಾರಿಗಳಿಗೆ ಯಾವ ಸ್ಥಳಗಳನ್ನು ನೀಡಬೇಕು ಎಂಬುದೇ ಸರ್ಕಾರದ ಮುಂದಿರುವ ಪ್ರಶ್ನೆ.