ದೊಡ್ಡಬಳ್ಳಾಪುರ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಎರಡು ವರ್ಷ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಒಂದು ವರ್ಷ ಸೇರಿ ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಕೇಸರಿ ನಾಯಕರು ವೇದಿಕೆ ಮೇಲೆ ಭರ್ಜರಿ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಜನಸ್ಪಂದನಾ ಸಮಾವೇಶಕ್ಕೆ ಒಂದೆಡೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ. ಮತ್ತೊಂದೆಡೆ ಕಲಾತಂಡಗಳ ವೈಭವ ಕಣ್ಮನ ಸೆಳೆಯುತ್ತಿದೆ. ಇನ್ನೊಂದೆಡೆ ವೇದಿಕೆ ಮೇಲೆ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ತಂಡದವರು ಹಾಡಿದ ’ಕುಲದಲ್ಲಿ ಮೇಲ್ಯಾವುದೋ…’ ಹಾಡು ಹಾಡುತ್ತಿದ್ದಂತೆಯೇ ಸಚಿವ ಎಂ.ಟಿ.ಬಿ.ನಾಗರಾಜ್, ಶಾಸಕ ಎಸ್.ಆರ್.ವಿಶ್ವನಾಥ್ ಭರ್ಜರಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.
ಇದೇ ವೇಳೆ ವೇದಿಕೆ ಮೇಲೆ ನಿಂತಿದ್ದ ಸಚಿವ ಮುನಿರತ್ನ ಕೂಡ ಡಾನ್ಸ್ ಗೆ ಹೆಜ್ಜೆ ಹಾಕಿದ್ದು, ಎಂಟಿಬಿ ನಾಗರಾಜ್ ಹಾಗೂ ಎಸ್.ಆರ್.ವಿಶ್ವನಾಥ್ ಗೆ ಸಾಥ್ ನೀಡಿದ್ದಾರೆ. ವೇದಿಕೆಯ ಮೇಲೆ ಕೇಸರಿ ನಾಯಕರ ಭರ್ಜರಿ ಡಾನ್ಸ್ ಗಮನ ಸೆಳೆದಿದೆ.
ಬಿಜೆಪಿ ಸಮಾವೇಶಕ್ಕೆ 5000 ಬಸ್ ವ್ಯವಸ್ಥೆ ಮಾಡಲಾಗಿದ್ದು, 3 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಭಾರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ವಿ.ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಸಮಾವೇಶಕ್ಕೆ ಆಗಮಿಸಿದ್ದು, ಕೇಂದ್ರ ಸಚಿವೆ ಸ್ಮ್ರಿತಿ ಇರಾನಿ ಆಗಮಿಸಲಿದ್ದಾರೆ.