ಗೋವಾದ ಅಸ್ಸಾಗಾವೊದಲ್ಲಿರುವ ಸಿಲ್ಲಿ ಸೋಲ್ಸ್ ಕೆಫೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ನ ಪರವಾನಗಿಯನ್ನು ಮೋಸದಿಂದ ನವೀಕರಿಸಲಾಗಿದೆ ಎಂದು ಗೋವಾದ ಅಬಕಾರಿ ಆಯುಕ್ತರು ಜುಲೈನಲ್ಲಿ ನೋಟಿಸ್ ಸಲ್ಲಿಸಿದ್ದರು.
ಈ ಕೆಫೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಪಾಲಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದ್ರೆ ಕೆಫೆಗೂ ತಮ್ಮ ಕುಟುಂಬದವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಮೃತಿ ಇರಾನಿ ಕುಟುಂಬ ನ್ಯಾಯಾಧೀಶರಿಗೆ ತಿಳಿಸಿತ್ತು.
ಆದ್ರೀಗ ಆರ್.ಟಿ.ಐ. ಅಡಿ ಹೊಸ ವಿಚಾರ ಬೆಳಕಿಗೆ ಬಂದಿದೆ. ಸ್ಮೃತಿ ಇರಾನಿ ಅವರ ಪತಿ ಮತ್ತು ಮಕ್ಕಳು ಈ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಆರ್‌ಟಿಐ ದಾಖಲೆಗಳಲ್ಲಿ ಬಹಿರಂಗವಾಗಿದೆ.
ಇನ್ನೊಂದೆಡೆ ಸಿಲ್ಲಿ ಸೋಲ್ಸ್ ತಮ್ಮ ಮಗಳಿಗೆ ಸೇರಿದ್ದೆಂದು ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಸ್ಮೃತಿ ಇರಾನಿ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ಕಳೆದ ತಿಂಗಳು ದೆಹಲಿ ಹೈಕೋರ್ಟ್‌ಗೆ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿತ್ತು. ಈ ಪ್ರಮಾಣಪತ್ರದಲ್ಲಿ ಸ್ಮೃತಿ ಇರಾನಿ ಮತ್ತವರ ಪುತ್ರಿ, ಗೋವಾದ ಅಸ್ಸಾಗಾವೊ, ಬೌಟಾ ವಾಡೋ ಹೌಸ್ 452ಯಲ್ಲಿರುವ ಸಿಲ್ಲಿ ಸೋಲ್ಸ್ ಕೆಫೆ& ಬಾರ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದರು.
ಬಾರ್‌ನ ಅಬಕಾರಿ ಪರವಾನಗಿಯನ್ನು ಅಕ್ರಮವಾಗಿ ನವೀಕರಿಸಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದ ವಕೀಲ ಐರಿಸ್ ರಾಡ್ರಿಗಸ್, ಗೋವಾ ಸರ್ಕಾರದಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಾರ್‌ನ ಮಾಲೀಕತ್ವದ ಕುರಿತಂತೆ ದಾಖಲೆಗಳನ್ನು ಪಡೆದಿದ್ದಾರೆ.
ಆರ್.ಟಿ.ಐ. ಪ್ರಕಾರ ಸಿಲ್ಲಿ ಸೋಲ್ಸ್‌ಗೆ ಅಬಕಾರಿ ಪರವಾನಗಿ ನೀಡಿದ ಕಂಪನಿಯ ಶೇ.75ರಷ್ಟು ಮಾಲೀಕತ್ವವನ್ನು ಸ್ಮೃತಿ ಇರಾನಿ ಅವರ ಪತಿ ಮತ್ತು ಕುಟುಂಬದವರು ಹೊಂದಿದ್ದಾರೆ. ಈ ವಿಚಾರ ಬಹಿರಂಗವಾಗ್ತಿದ್ದಂತೆ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ಇದೆ.