ಕೆಲಸದ ನಿಮಿತ್ತ ಪರ ಊರುಗಳಿಗೆ ತೆರಳಿದ ಸಂದರ್ಭದಲ್ಲಿ ವಾಸ್ತವ್ಯದ್ದೇ ದೊಡ್ಡ ಸಮಸ್ಯೆ. ಸೀಮಿತ ಅವಧಿಗೆ ಭೇಟಿ ನೀಡಿದ ವೇಳೆ ಅಗತ್ಯವಿಲ್ಲದಿದ್ದರೂ ಸಹ ಒಂದು ದಿನ ಪೂರ ಹೋಟೆಲ್ ರೂಮ್ ಬಾಡಿಗೆಗೆ ಪಡೆದುಕೊಳ್ಳುವಂತಾಗುತ್ತಿದ್ದು, ಅನಗತ್ಯವಾಗಿ ದುಬಾರಿ ದರ ತೆರಬೇಕಾಗುತ್ತದೆ. ಇದಕ್ಕೆ ಸ್ಟಾರ್ಟ್ ಅಪ್ ಒಂದು ಪರಿಹಾರ ಕಂಡುಕೊಂಡಿದೆ.
ನೋಯ್ಡಾ ಮೂಲದ ಸ್ಟಾರ್ಟ್ ಅಪ್ ಕಂಪನಿ Brevistay ಗಂಟೆಗಳ ಲೆಕ್ಕದಲ್ಲಿ ಗ್ರಾಹಕರಿಗೆ ಹೋಟೆಲ್ ರೂಮ್ ಬಾಡಿಗೆ ನೀಡುವ ವ್ಯವಸ್ಥೆ ಮಾಡಿದ್ದು, 3, 6 ಹಾಗೂ 12 ಗಂಟೆ ಅವಧಿ ಲೆಕ್ಕದಲ್ಲಿ ರೂಮ್ ಬಾಡಿಗೆ ನೀಡುವ ಆಪ್ ಅಭಿವೃದ್ಧಿಪಡಿಸಿದ್ದು, ಇವರ ನೆಟ್ವರ್ಕ್ ನಲ್ಲಿ ದೇಶದ 70 ನಗರಗಳಲ್ಲಿನ ಮೂರು ಸಾವಿರಕ್ಕೂ ಅಧಿಕ ಹೋಟೆಲ್ ಗಳಿವೆ.
ಇವರು ಅಭಿವೃದ್ಧಿಪಡಿಸಿರುವ ಆಪ್ ಈಗಾಗಲೇ 8 ಲಕ್ಷಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದು, ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಬಜೆಟ್ ಹೋಟೆಲ್ ಗಳು ಮಾತ್ರವಲ್ಲದೆ ಐಷಾರಾಮಿ ಹೋಟೆಲ್ಗಳಾದ ಹಯಾತ್ ಬೆಂಗಳೂರು, ಹಯಾತ್ ಪುಣೆ, ಪ್ರೈಡ್ ಬೆಂಗಳೂರು, ಫ್ರೈಡ್ ಚೆನ್ನೈ ಕೂಡ ಸೇವೆಗೆ ಲಭ್ಯವಿದೆ. ರೂಮುಗಳು ಖಾಲಿ ಇದ್ದ ವೇಳೆ ಅವುಗಳನ್ನು ಅಗತ್ಯವಿದ್ದ ಗ್ರಾಹಕರಿಗೆ ಒದಗಿಸಿದರೆ ಹೋಟೆಲ್ ಮಾಲೀಕ ಹಾಗೂ ಗ್ರಾಹಕ ಇಬ್ಬರಿಗೂ ಅನುಕೂಲವಾಗುತ್ತದೆ ಎಂಬ ಉದ್ದೇಶ ಈ ಕಂಪನಿಯದ್ದು.