ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದ ಮಹೇಂದರ್ ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹೇಂದರ್ ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದರೆ, ಇಬ್ಬರು ಸೋನಿಪತ್‌ನ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಹೇಂದರ್ ಗಢ್ ಘಟನೆಯ ಬಗ್ಗೆ ಸಿವಿಲ್ ಸರ್ಜನ್ ಡಾ ಅಶೋಕ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 7 ಅಡಿಯ ಗಣೇಶ ಮೂರ್ತಿ ನಿಮಜ್ಜನಕ್ಕೆ ಕೊಂಡೊಯ್ಯುತ್ತಿದ್ದಾಗ ಮಹೇಂದರ್ ಗಢದ ಕಾಲುವೆಯಲ್ಲಿ 9 ಯುವಕರು ನೀರಿನ ಪ್ರವಾಹಕ್ಕೆ ಕೊಚ್ಚಿಹೋದರು. ಜಿಲ್ಲಾಡಳಿತ ಎನ್‌ಡಿಆರ್‌ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ನಾಲ್ವರು ಮೃತಪಟ್ಟರು. ಇತರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟ್ಟರ್‌ನಲ್ಲಿ, ಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ನೀರಿನಲ್ಲಿ ಮುಳುಗಿ ಅನೇಕ ಜನರು ಅಕಾಲಿಕ ಮರಣದ ಸುದ್ದಿ ನೋವು ತಂದಿದೆ ಎಂದು ಹೇಳಿದ್ದಾರೆ.
ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಮೃತರ ಕುಟುಂಬಗಳೊಂದಿಗೆ ಇದ್ದೇವೆ. NDRF ತಂಡವು ಅನೇಕ ಜನರನ್ನು ಮುಳುಗುವಿಕೆಯಿಂದ ರಕ್ಷಿಸಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
10 ದಿನಗಳ ಗಣೇಶ ಹಬ್ಬ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಹಲವಾರು ಗಣೇಶ ಮೂರ್ತಿಗಳನ್ನು ನದಿಗಳು, ಕಾಲುವೆಗಳು ಮತ್ತು ಇತರ ಜಲಮೂಲಗಳಲ್ಲಿ ನಿಮಜ್ಜನ ಮಾಡಲಾಯಿತು.