ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಚಾರಣೆ ಎದುರಿಸುತ್ತಿರುವ 33 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಡಿಮೋಷನ್ ಮಾಡಿದೆ. ಕಳಂಕಿತರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಯೋಜಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದು, ವರ್ಗಾವಣೆ ಮಾಡಲಾದ 33 ಬಿಇಒ ಸ್ಥಾನಗಳಿಗೆ ತಾತ್ಕಾಲಿಕವಾಗಿ ಬೇರೆ ಅಧಿಕಾರಿಗಳಿಗೆ ಪ್ರಭಾರ ಜವಾಬ್ದಾರಿ ನೀಡಲು ಸೂಚಿಸಿದ್ದಾರೆ.
ಬಿಇಒ ಸ್ಥಾನದಿಂದ 33 ಅಧಿಕಾರಿಗಳನ್ನು ಶಿಕ್ಷಣ ಇಲಾಖೆಯ ಇತರೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಖಾಸಗಿ ಶಾಲಾ ಸಂಘಟನೆಗಳಿಂದ ಆರೋಪಿಸಲಾಗಿತ್ತು.
ನಾಗರೀಕ ಸೇವಾ ನಿಯಮಗಳ ಪ್ರಕಾರ, ಕಾರ್ಯಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಅಧಿಕಾರಿ ವಿರುದ್ಧ ಇಲಾಖೆ ವಿಚಾರಣೆ ಅಥವಾ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಆರಂಭಿಸಿದ್ದರೆ, ದಂಡನೆ ವಿಧಿಸಿದ್ದರೆ ಅಂತಹವರನ್ನು ಕಾರ್ಯಕಾರಿಯಲ್ಲದ ಹುದ್ದೆಗೆ ವರ್ಗಾಯಿಸತಕ್ಕದ್ದು ಎನ್ನುವ ನಿಯಮದ ಅನ್ವಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಮತ್ತು ವಿಚಾರಣೆ ಎದುರಿಸುತ್ತಿರುವ 33 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಡಿಮೋಷನ್ ಮಾಡಲಾಗಿದೆ ಎಂದು ಹೇಳಲಾಗಿದೆ.