ಬೆಂಗಳೂರು: ಶಿಕ್ಷಣ ಇಲಾಖೆಯ 17 ಸೇವೆಗಳನ್ನು ಆನ್ಲೈನ್ ಮಾಡಲಾಗಿದ್ದು, ಸೆಪ್ಟೆಂಬರ್ 15 ರಿಂದ ಜಾರಿಯಾಗಲಿದೆ. 2.60 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ.
ಶಿಕ್ಷಕರು ಇನ್ನು ಮುಂದೆ ರಜೆ ಮಂಜೂರಾತಿ, ಉನ್ನತ ಶಿಕ್ಷಣ, ವಿದೇಶ ಪ್ರಯಾಣ ಸೇರಿದಂತೆ ಸಣ್ಣಪುಟ್ಟ ಕಾರ್ಯಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿಗಳಿಗೆ ಅಲೆಯಬೇಕಿಲ್ಲ. 17 ಸೇವೆಗಳನ್ನು ಆನ್ಲೈನ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಶಿಕ್ಷಕ ಮಿತ್ರ ಆಪ್ ಮೂಲಕ ಈ ಸೇವೆಗಳು ದೊರೆಯಲಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 2.60 ಲಕ್ಷ ಶಿಕ್ಷಕರು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ರಜೆ ಸೌಲಭ್ಯ, ಹಬ್ಬದ ಮುಂಗಡ ಮಂಜೂರಾತಿ, ವಿಶೇಷ ಭತ್ಯೆ, ವಿಕಲ ಚೇತನರ ಭತ್ಯೆ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಅನುಮೋದನೆ, ಪ್ರಥಮ ವೇತನ ಪ್ರಮಾಣ ಪತ್ರ, ಉನ್ನತ ಹುದ್ದೆಗಳಿಗೆ ಅರ್ಜಿ, ಕಾಲಮಿತಿ ಬಡ್ತಿ, ಉನ್ನತ ಶಿಕ್ಷಣ, ವಿದೇಶ ಪ್ರವಾಸಕ್ಕೆ ಅನುಮತಿ, ಪಾಸ್ಪೋರ್ಟ್ ನವೀಕರಣಕ್ಕೆ ನಿರಕ್ಷೇಪಣಾ ಪತ್ರ, ಪ್ರಭಾರ ಭತ್ಯೆ, ನಿವೇಶನ ಖರೀದಿಗೆ ಅನುಮತಿ ಮೊದಲಾದ ಸೇವೆಗಳನ್ನು ಆನ್ಲೈನ್ ಗೊಳಿಸಲಾಗಿದೆ.