
ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಸಹಜ. ಸದ್ಯ ಧೋನಿ ಕ್ರಿಕೆಟ್ ಹೊರತಾಗಿ ಬೇರೊಂದು ಕ್ರೀಡೆ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಂತೆ ಕಾಣ್ತಿದೆ. ಯಾಕಂದ್ರೆ ಧೋನಿ ಹಾಗೂ ಕಪಿಲ್ ದೇವ್ ಇಬ್ಬರೂ ಅಮೆರಿಕ ತಲುಪಿದ್ದಾರೆ.
ಅಲ್ಲಿ ಯುಎಸ್ ಓಪನ್ ಟೆನಿಸ್ ನೋಡಲು ತೆರಳಿದ್ದಾರೆ. ಇಬ್ಬರೂ ಜೊತೆಯಾಗಿ ಟೆನಿಸ್ ವೀಕ್ಷಿಸ್ತಾ ಇರೋ ವಿಡಿಯೋ ವೈರಲ್ ಆಗಿದೆ. ಆರ್ಥರ್-ಆಶ್ ಸ್ಟೇಡಿಯಂನಲ್ಲಿ ಇವರು ಹಾಜರಿದ್ದರು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಧೋನಿ ಹಾಗೂ ಕಪಿಲ್ ದೇವ್ ಸಹ ಇದ್ದರು. ಪರಸ್ಪರ ಕೈಕುಲುಕುತ್ತ ಸಂಭಾಷಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಯುಎಸ್ ಓಪನ್ ಪಂದ್ಯಗಳನ್ನು ಪ್ರಸಾರ ಮಾಡ್ತಿರೋ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.
ಧೋನಿಯನ್ನು ಸ್ಟೇಡಿಯಂನಲ್ಲಿ ನೋಡಿ ಅಭಿಮಾನಿಗಳು ಕೂಡ ಹರ್ಷೋದ್ಘಾರ ಮಾಡಿದ್ದಾರೆ. ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಶ್ರೇಷ್ಠ ನಾಯಕರು ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ನಂತರ 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. 2007ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತ್ತು.