ತಿಹಾರ್ ಜೈಲಿನಲ್ಲಿ ಇತರ ಕೈದಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಕೈದಿಯೊಬ್ಬ ನಾಲ್ಕು ಮೊಬೈಲ್ ಫೋನ್‌ಗಳನ್ನು ನುಂಗಿದ್ದಾನೆ. ಮೊಬೈಲ್ ನುಂಗಿದ್ದರಿಂದ ಅವನಿಗೆ ತೀವ್ರ ಹೊಟ್ಟೆನೋವು ಶುರುವಾಗಿತ್ತು. ನಂತರ ತಾನು ಮಾಡಿದ ಕೃತ್ಯದ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ.
ಆರಂಭದಲ್ಲಿ ಆತ ಮೊಬೈಲ್ ನುಂಗಿದ್ದೇನೆ ಎಂದಾಗ ಜೈಲು ಅಧಿಕಾರಿಗಳು ನಂಬಿರಲೇ ಇಲ್ಲ. ಆದ್ರೆ ಹೊಟ್ಟೆನೋವಿನಿಂದ ಕೈದಿ ಒದ್ದಾಡಲಾರಂಭಿಸುತ್ತಿದ್ದಂತೆ ಆತನನ್ನು ದೀನ್‌ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸಾಗಿಸಲಾಯ್ತು. ಅಲ್ಲಿ ಎಂಡೋಸ್ಕೋಪಿ ಮಾಡಿದಾಗ ಮೊಬೈಲ್ ನುಂಗಿರುವುದು ದೃಢಪಟ್ಟಿದೆ.
ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೊಟ್ಟೆಯಲ್ಲಿದ್ದ ಎರಡು ಮೊಬೈಲ್‌ಗಳನ್ನು ಹೊರತೆಗೆದಿದೆ. ಇನ್ನೂ ಎರಡು ಮೊಬೈಲ್‌ಗಳು ಕೈದಿಯ ಹೊಟ್ಟೆಯಲ್ಲೇ ಇವೆ. ಅವನ್ನು ಹೊರತೆಗೆಯಲು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಕೈದಿಯನ್ನು 1 ನೇ ನಂಬರ್‌ನ ಕೋಣೆಯಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ ಆತ ಪೆರೋಲ್ ಮೇಲೆ ಹೊರಹೋಗಿ ಬಂದಿದ್ದ. ಜೈಲಿನಲ್ಲಿ ಹಣಗಳಿಸಲು ಹೊಸ ಐಡಿಯಾದೊಂದಿಗೆ ಮರಳಿದ್ದ. ಜೈಲು ಅಧಿಕಾರಿಗಳ ಕಣ್ತಪ್ಪಿಸಿ ಇತರ ಕೈದಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಚಿಕ್ಕ ಚಿಕ್ಕ ಮೊಬೈಲ್‌ಗಳನ್ನು ನುಂಗಿಕೊಂಡು ಬಂದಿದ್ದಾನೆ.
ಅಧಿಕಾರಿಗಳಿಗೆ ಇದ್ಯಾವುದರ ಸುಳಿವೂ ಸಿಕ್ಕಿರಲಿಲ್ಲ. ನುಂಗಿದ್ದ ಫೋನ್‌ಗಳು ಮಲದಲ್ಲಿ ಬರುವಂತೆ ಮಾಡಲು ಆತ ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಅದು ಸಾಧ್ಯವಾಗದೇ ಇದ್ದಿದ್ದರಿಂದ ಆತನಿಗೆ ಹೊಟ್ಟೆನೋವು ಶುರುವಾಗಿದೆ. ಜೀವ ಭಯದಿಂದ ಅಧಿಕಾರಿಗಳಿಗೆ ಆತ ಮಾಹಿತಿ ನೀಡಿದ್ದಾನೆ.