ಶಿವಮೊಗ್ಗ: ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಐತಿಹಾಸಿಕ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವ ಇಂದು ಬೆಳಿಗ್ಗೆ 11ಗಂಟೆಗೆ ಆರಂಭವಾಗಿದೆ.
ಪೊಲೀಸರ ಬಿಗಿ ಬಂದೋಬಸ್ತ್, ಯುವಕರ ಸಂಭ್ರಮೋತ್ಸವ, ಕಲಾತಂಡಗಳ ಸಡಗರಗಳ ನಡುವೆ ಮೆರವಣಿಗೆ ಶಾಂತಿಯುತವಾಗಿ ಸಾಗುತ್ತಿದೆ.
ಇಂದು ಬೆಳಿಗ್ಗೆ ಸ್ವಾಮಿಗೆ ಮಹಾ ಮಂಗಳಾರತಿ ಪೂಜೆ ನೆರವೇರಿಸುವುದರೊಂದಿಗೆ ರಾಜಬೀದಿ ಉತ್ಸವ ಆರಂಭವಾಯಿತು. ಹರಿಗೆಯ ಕೆ.ಕೆ.ಗೌಡ ಕುಟುಂಬದವರಿಂದ 75 ಕೆ.ಜಿ. ತೂಕದ ಸೇಬಿನ ಹಾರ ಸಮರ್ಪಿಸಲಾಯಿತು.
ಹಿಂದೂ ಮಹಾಸಭಾ ಸಂಘಟನೆಯ ಅಧ್ಯಕ್ಷ ಆರ್. ಸುರೇಶ್ ಕುಮಾರ್, ಶಾಸಕರಾದ ಕೆ.ಎಸ್. ಈಶ್ವರಪ್ಪ, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಎಂ.ಬಿ. ಭಾನುಪ್ರಕಾಶ್, ಆರ್ಎಸ್ಎಸ್ನ ಪಟ್ಟಾಭಿರಾಮ್, ಪಾಲಿಕೆ ಸದಸ್ಯರು, ಪ್ರಮುಖರಾದ ಎಂ.ಶ್ರೀಕಾಂತ್, ಹೆಚ್.ಎಸ್. ಸುಂದರೇಶ್, ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ ಮೊದಲಾದವರು ಭಾಗವಹಿಸಿದ್ದರು.
ಸುಮಾರು ಮೂರು ದಶಕಗಳಿಂದ ಹಿಂದೂಮಹಾಸಭಾ ಗಣಪತಿಯ ರಾಜಬೀದಿ ಉತ್ಸವದಲ್ಲಿ ಸಾರಥಿ ಧನಂಜಯ ಅವರೇ ಈ ಬಾರಿಯೂ ಟ್ರ್ಯಾಕ್ಟರ್ ಚಾಲನೆ ಮಾಡಿದರು.
ಹಿಂದೂ ಮಹಾಸಭಾ ಸಂಘಟನೆಯ ವತಿಯಿಂದ 78ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಈ ಬಾರಿ ಅದ್ದೂರಿ ಮೆರವಣಿಗೆಗೆ ರಂಗು ತಂದಿದ್ದು, ಇಡೀ ನಗರವೇ ಕೇಸರಿ ಮಯವಾಗಿದೆ. ಕರೋನಾ ಹಿನ್ನಲೆಯಲ್ಲಿ ಕಳೆದೆರಡು ವರ್ಷ ಅದ್ಧೂರಿ ಮೆರವಣಿಗೆ ನಡೆದಿರಲಿಲ್ಲ. ಇಂದಿನ ಅದ್ದೂರಿ ಮೆರವಣಿಗೆಯಲ್ಲಿ ಕಲಾತಂಡಗಳು, ಮಂಗಳ ವಾದ್ಯ, ಚಂಡೆಮೇಳ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತಂದಿದ್ದು, ಕುಣಿತದೊಂದಿಗಿನ ಘೋಷಣೆಗಳು ಮುಗಿಲು ಮುಟ್ಟಿವೆ. ವಿಶೇಷ ವೆಂದರೆ ಶಾಸಕ ಕೆ.ಎಸ್.ಈಶ್ವರಪ್ಪ ‘ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗುತ್ತಿದ್ದುದ್ದು ಇದು ಯುವಕರನ್ನು ಮತ್ತಷ್ಟು ಹುರಿದುಂಬಿಸುತ್ತಿತ್ತು.
ಗಣಪತಿಯ ರಾಜಬೀದಿ ಉತ್ಸವ ಸಾಗುವ ಎಸ್.ಪಿ.ಎಂ. ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಮನೆ ಮುಂದೆ ರಂಗೋಲಿ ಹಾಕಿ ಚಿತ್ತಾಕರ್ಷಕ ಬಣ್ಣ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀ ರಾಮ ಘೋಷಣೆ ಕೂಗುತ್ತಿದ್ದರು.
ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ಎಸ್ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆÉ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.
ಅಮೀರ್ ಅಹಮ್ಮದ್ ವೃತ್ತದಲ್ಲಿ ವೀರ ಸಾವರ್ಕರ್ ಬೃಹತ್ ಫ್ಲೆಕ್ಸ್ ಹಾಕಲಾಗಿದೆ. ಇಡೀ ವೃತ್ತ ಕೇಸರಿ ಮಯವಾಗಿದೆ. ನೆಹರೂ ರಸ್ತೆಯಲ್ಲಿ ಭಗತ್ಸಿಂಗ್, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ರಾಣಾ ಪ್ರತಾಪ್ ಸಿಂಹ, ಸರ್ದರ್ ವಲ್ಲಭ ಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಪುರಂದರ ದಾಸರು, ಝಾನ್ಸಿರಾಣಿ ಲಕ್ಷ್ಮೀ ಬಾಯಿ ಸೇರಿದಂತೆ ಅನೇಕ ಮಹನೀಯರ ಕಟೌಟ್ಗಳನ್ನು ಹಾಕಲಾಗಿದೆ.
ಗಾಂಧಿಬಜಾರ್ನ ಪ್ರವೇಶದ್ವಾರದಲ್ಲಿ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ ಅರ್ಜುನ ಯುದ್ಧ ಮಾಡುತ್ತಿರುವ ಪ್ರತಿಕೃತಿಯನ್ನು ಸ್ಥಾಪಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ನಿನ್ನೆ ರಾತ್ರಿಯಿಂದಲೇ ಈ ದೃಶ್ಯವನ್ನು ಅಪಾರ ಸಂಖ್ಯೆ ಜನಸ್ತೋಮ ಸೇರಿ ಕಣ್ತುಂಬಿಕೊಳ್ಳುತ್ತಿದ್ದುದು ಕಂಡು ಬಂತು. ಯುವಕ, ಯುವತಿಯರು ಫೋಟೋ, ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಿವಪ್ಪನಾಯಕ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಆಂಜನೆಯ ಕಟೌಟ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಗಣಪತಿ ಸಾಗುವ ರಸ್ತೆಯಲ್ಲಿ ಯುವಕರ ನೃತ್ಯ ಗಮನಸೆಳೆಯುವಂತಿತ್ತು. ಯುವತಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.
ಮೆರವಣಿಗೆಯ ಮಾರ್ಗ ಉದ್ದಕ್ಕೂ ಭಕ್ತರು, ಯುವಕರು, ಸಾರ್ವಜನಿಕರಿಗೆ ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಲಘು ಉಪಹಾರ, ಪಾನೀಯ, ಸಿಹಿ ವಿತರಿಸಲಾಯಿತು. ಹೀಗೆ ಹಿಂದು ಮಹಾಸಭಾ ಗಣಪತಿ ಮೆರವಣಿಗೆ ವೈಭವದಿಂದ ಸಾಗಿದೆ.
ಇನ್ನು ರಾಜಬೀದಿಯ ಮಾರ್ಗದಲ್ಲಿ ಯುವಕರ ದಂಡು ಬೈಕ್ಗಳಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುತ್ತಾ ಸಾಗುತ್ತಿದ್ದರು. ಇನ್ನೂ ವಿಶೇಷವೆಂದರೆ ಗಣಪತಿಯ ರಾಜಬೀದಿ ಉತ್ಸವಕ್ಕೆ ಸ್ವಾಗತ ಕೋರುವ ಫೆಕ್ಸ್ಗಳನ್ನು ಮಾರ್ಗದುದ್ದಕ್ಕೂ ಪುನಿತ್ ರಾಜ್ಕುಮಾರ್ ಭಾವಚಿತ್ರ ಹಾಕಲಾಗಿದೆ. ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳವರು ಗಣಪತಿಗೆ ಬೃಹತ್ ಹಾರಗಳನ್ನು ಹಾಕಲು ಸಿದ್ಧತೆ ನಡೆಸಿದ್ದರು.
ಇನ್ನು ಮೊದಲು ಡಿಜೆಗೆ ಅವಕಾಶ ನೀಡದ ಪೊಲೀಸ್ ಇಲಾಖೆ ಒತ್ತಡ ಹೆಚ್ಚಾಗಿದ್ದರಿಂದ ಡಿಜೆಗೆ ಅವಕಾಶ ಕಲ್ಪಿಸಿದ್ದು, ಗೋಪಿ ವೃತ್ತದಲ್ಲಿ ಡಿಜೆ ನೃತ್ಯಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಇದು ವಿಶೇಷ ಆಕರ್ಷಣೆಯಾಗಲಿದೆ.
ಮೆರವಣಿಗೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಠಿ ಕಣ್ಗಾವಲು ಹಾಗೂ ಡ್ರೋಣ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಎಎ ಸರ್ಕಲ್ನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆರ್ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.