ಗಾಜಿಯಾಬಾದ್: ಯುವತಿ ಮೇಲೆ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಮದುವೆಗೆ ನಿರಾಕರಿಸಿದಾಗ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಆಕೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸರ್ಕಲ್ ಆಫೀಸರ್ ಅಂಶು ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ 27 ವರ್ಷದ ಯುವಕ ವಿಜಯನಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಈ ವೇಳೆ ಯುವತಿಯ ಕೋಣೆಗೆ ಅಕ್ರಮವಾಗಿ ಪ್ರವೇಶಿಸಿ ಮದುವೆಯಾಗುವಂತೆ ಬಲವಂತ ಮಾಡಿದ್ದ. ಆಕೆ ನಿರಾಕರಿಸಿದಾಗ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ್ದ. ಆಗಸ್ಟ್ ಅಂತ್ಯದಲ್ಲಿ ಯುವತಿ ಮಾರುಕಟ್ಟೆಗೆ ಹೋಗುತ್ತಿದ್ದಾಗ ಆಕೆಯನ್ನು ಅಡ್ಡಗಟ್ಟಿ ಬೆದರಿಸಿದ ಆರೋಪಿ ಗನ್ ತೋರಿಸಿ ಕಿಡ್ನ್ಯಾಪ್ ಮಾಡಿದ್ದಾನೆ.
ರೆಸ್ಟೋರೆಂಟ್ ವೊಂದಕ್ಕೆ ಕರೆದುಕೊಂಡು ಹೋಗಿ ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ. ಯುವತಿ ನಿರಾಕರಿಸಿದಾಗ ಹಲ್ಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ಯುವತಿ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಆಕೆಯನ್ನು ಅಲ್ಲೇ ದಬ್ಬಿ ಆರೋಪಿ ಹೋಗಿದ್ದಾನೆ. ಇತ್ತೀಚೆಗೆ ವಿಡಿಯೋ ಹೊರ ಬಂದ ನಂತರ ಯುವತಿಯ ಸಹೋದರ ಆಕೆಯನ್ನು ಪ್ರಶ್ನಿಸಿದಾಗ ಇದೆಲ್ಲ ಸಂಗತಿಗಳು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದು, ಗನ್ ವಶಪಡಿಸಿಕೊಂಡಿದ್ದಾರೆ.