ಮುಂಬೈ: ಹಬ್ಬದ ಹೊತ್ತಲ್ಲಿ ಹೊಸ ಟಿವಿ, ಸ್ಮಾರ್ಟ್ ಫೋನ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ.
ಗ್ರಾಹಕರನ್ನು ಆಕರ್ಷಿಸಲು ನಿರ್ಧರಿಸಿರುವ ಕಂಪನಿಗಳು ದೀಪಾವಳಿ, ದಸರಾ, ನವರಾತ್ರಿ ಒಳಗೊಂಡ ಹಬ್ಬದ ಋತುವಿನಲ್ಲಿ ಹೆಚ್ಚಿನ ರಿಯಾಯಿತಿ ನೀಡಲು ಮತ್ತು ಪ್ರಚಾರಕ್ಕೆ ಹೆಚ್ಚಿನ ಹಣ ಖರ್ಚು ಮಾಡಲು ಮುಂದಾಗಿವೆ. ಹಬ್ಬದ ಋತುವಿನಲ್ಲಿ ಹೆಚ್ಚಿನ ವಹಿವಾಟು ನಡೆಸುವ ಗುರಿ ಹೊಂದಿರುವ ಟಾಪ್ ಬ್ರಾಂಡ್ ಕಂಪನಿಗಳು ಹೆಚ್ಚಿನ ರಿಯಾಯಿತಿ ನೀಡಲು ಮುಂದಾಗಿವೆ.
ಗ್ರಾಹಕರಿಗೆ ಆಕರ್ಷಕ ರಿಯಾಯಿತಿ, ಕ್ಯಾಶ್ ಬ್ಯಾಕ್ ಆಫರ್ ನೀಡಲು ಕಂಪನಿಗಳು ತಯಾರಿ ಮಾಡಿಕೊಂಡಿವೆ. ಕೊರೋನಾ ನಂತರ ಚೇತರಿಕೆ ಕಂಡಿರುವ ಕಂಪನಿಗಳು ಹಬ್ಬದ ಹೊತ್ತಲ್ಲಿ ಭರ್ಜರಿ ಲಾಭ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. 5ಜಿ ಸೇವೆ ಆರಂಭವಾಗುತ್ತಿರುವುದರಿಂದ 4ಜಿ ಸ್ಮಾರ್ಟ್ ಫೋನ್ ದಾಸ್ತಾನು ಖಾಲಿ ಮಾಡಲು ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲು ಕಂಪನಿಗಳು ನಿರ್ಧರಿಸಿವೆ.
ರಿಯಲ್ ಮಿ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ 700 ಕೋಟಿ ರೂ. ಮೌಲ್ಯದ ರಿಯಾಯಿತಿ ನೀಡಲು ಸಜ್ಜಾಗಿದೆ. ಎಲೆಕ್ಟ್ರಾನಿಕ್ ಬ್ರಾಂಡ್ ಹೈಯರ್ ಕಂಪನಿ ಹಬ್ಬದ ಸೀಸನ್ ನಲ್ಲಿ ಪ್ರಚಾರ ಮತ್ತು ಜಾಹೀರಾತಿಗೆ 100 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದೆ. ಎಲ್ಜಿ ಇಂಡಿಯಾ ಫೆಸ್ಟಿವಲ್ ವೆಚ್ಚವನ್ನು ಶೇ. 25 ರಷ್ಟು ಹೆಚ್ಚಿಸುವುದಾಗಿ ಹೇಳಿದೆ.