ಬೆಳಗಾವಿ: ಹೃದಯಾಘಾತದಿಂದ ವಿಧಿವಶರಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನಿನ್ನೆ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಏರ್ ಲಿಫ್ಟ್ ಮಾಡಲಾಗಿತ್ತು. ಬಳಿಕ ಸಾಂಬ್ರಾ ನಿಲ್ದಾಣದಿಂದ ಅಲಂಕೃತಗೊಂಡ ಸೇನಾ ವಾಹಾನದಲ್ಲಿ ಮೆರವಣಿಗೆ ಮೂಲಕ ಸಚಿವರ ಪಾರ್ಥಿವ ಶರೀರವನ್ನು ಬೆಲ್ಲದ ಬಾಗೇವಾಡಿಯ ಸ್ವಗ್ರಾಮಕ್ಕೆ ತರಲಾಯಿತು.
ಸಚಿವರ ಅಂತಿಮ ಯಾತ್ರೆ ಮೆರವಣಿಗೆಯಲ್ಲಿ ಸಾಗರೋಪಾದಿಯಲ್ಲಿ ಜನರು ಸಾಗಿದ್ದು, ಉಮೇಶ್ ಅಣ್ಣ ಅಮರ್ ರಹೇ ಎಂಬ ಘೋಷಣೆಯೊಂದಿಗೆ ಮೆರವಣಿಗೆಯುದ್ದಕ್ಕೂ ಸಾಗಿದರು. ಸ್ವಗ್ರಾಮಕ್ಕೆ ಬಂದ ಉಮೇಶ್ ಕತ್ತಿ ಅವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವಿಶ್ವರಾಜ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಕೆಲ ಕಾಲ ಇರಿಸಲಾಗಿತ್ತು. ಬಳಿಕ ಕುಟುಂಬದವರಿಂದ ಪೂಜೆ ಹಾಗೂ ಅಂತಿಮ ವಿಧಿವಿಧಾನಗಳು ನೆರವೇರಿದವು.
ಬಳಿಕ ಬೆಲ್ಲದ ಬಾಗೇವಾಡಿಯ ಸಚಿವರ ತೋಟದ ಮನೆ ಬಳಿ ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ ಕತ್ತಿ ಅವರ ಸಮಾಧಿ ಪಕ್ಕದಲ್ಲಿಯೇ ಸಚಿವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಆರ್.ಅಶೋಕ್, ಸಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿ.ಟಿ ರವಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಬೆಳಗಾವಿ ಭಾಗದ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು, ಕುಟುಂಬ ಸದಸ್ಯರು, ಉಮೇಶ್ ಕತ್ತಿ ಬೆಂಬಲಿಗರು ಭಾಗಿಯಾಗಿದ್ದರು.