ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮದ್ಯಪಾನಕ್ಕಿಂತ ಅಪಾಯಕಾರಿಯಾದದ್ದು ನಾವು ಪ್ರತಿದಿನ ತೆಗೆದುಕೊಳ್ಳುವ ಕೆಲವು ಮಾತ್ರೆಗಳು ಎಂಬ ಬಗ್ಗೆ ಡಾ. ರಾಜು ಕೃಷ್ಣಮೂರ್ತಿ ಮಹತ್ವದ ಮಾಹಿತಿಯನ್ನು, ಆರೋಗ್ಯ ಸಲಹೆಯನ್ನು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಮೈಕೈ ನೋವು, ತಲೆನೋವು, ಮಂಡಿನೋವು, ಸೊಂಟ ನೋವು ಬಂದರೂ ಪೇನ್ ಕಿಲ್ಲರ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಈ ಪೇನ್ ಕಿಲ್ಲರ್ ಮಾತ್ರೆಗಳಿಗೆ ಎಷ್ಟರ ಮಟ್ಟಿಗೆ ಹಲವರು ಅಡಿಕ್ಟ್ ಆಗಿದ್ದಾರೆ ಎಂದರೆ ಪೇನ್ ಕಿಲ್ಲರ್ ತೆಗೆದುಕೊಂಡಿಲ್ಲ ಎಂದರೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾರೆ. ಈ ರೀತಿ ಪೇನ್ ಕಿಲ್ಲರ್ ಮಾತ್ರೆಯನ್ನು ನಿರಂತರವಾಗಿ ಸೇವಿಸುವುದು ಮದ್ಯಪಾನಕ್ಕಿಂತಲೂ ಯಾವರೀತಿ ಅಪಾಯಕಾರಿಯಾಗಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಡಾ. ರಾಜು.
ಪೇನ್ ಕಿಲ್ಲರ್ ಮಾತ್ರೆಗಳನ್ನು ಸದಾ ಸೇವಿಸುವುದರಿಂದ ಟಾಲರೆನ್ಸ್ ಆಗುತ್ತೆ. ಅಂದರೆ ಉದಾಹರಣೆಗೆ ಆರಂಭದಲ್ಲಿ ಮದ್ಯಪಾನ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಒಂದು ಪೆಗ್ ತೆಗೆದುಕೊಂಡರೂ ಕಿಕ್ ಬರುತ್ತಿರುತ್ತದೆ. ಒಂದು ವಾರ ಅಷ್ಟೇ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವವರಿಗೆ ಅಷ್ಟು ಕಿಕ್ ಬರುವುದಿಲ್ಲ, ಎಫೆಕ್ಟ್ ಸಾಲುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಒಂದು ಪೆಗ್ ನಿಂದ ಎರಡು ಪೆಗ್, ಕ್ವಾರ್ಟರ್……ಹಾಫ್ ಕ್ವಾರ್ಟರ್……ಒಂದು ಫುಲ್ ಬಾಟಲ್ ಹೀಗೆ ಕುಡಿಯುವ ಪ್ರಮಾಣ ಜಾಸ್ತಿ ಮಾಡುತ್ತಾ ಹೋಗುತ್ತಾರೆ. ಅದೇ ರೀತಿ ಪೇನ್ ಕಿಲ್ಲರ್ ಅಥವಾ ನೋವಿನ ಮಾತ್ರೆಗಳು ಕೂಡ ಒಂದು ಮಾತ್ರೆ ಪ್ರಮಾಣ ಸಾಲುವುದಿಲ್ಲ ಎಂದು ಮಾತ್ರೆಗಳನ್ನು, ಡೋಸ್ ಗಳನ್ನು ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ನೋವಿನ ಮಾತ್ರೆಗಳನ್ನು ನಿರಂತರವಾಗಿ ನುಂಗುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆಯಲ್ಲಿ ಉರಿ ಆರಂಭವಾಗುತ್ತದೆ. ಅದರಿಂದ ಹೊಟ್ಟೆಯಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ಇದೆ. ಇದು ಕೆಲವೊಮ್ಮೆ ಹೊಟ್ಟೆಯಲ್ಲಿ ಅಲ್ಸರ್ ಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಅತಿಯಾದ ಹುಣ್ಣಿನಿಂದ ಕ್ಯಾನ್ಸರ್ ಆಗಿ ಕನ್ವರ್ಟ್ ಆಗುವ ಸಾಧ್ಯತೆ ಇದೆ. ನೋವಿನ ಮಾತ್ರೆಯಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
ಇನ್ನು ಪ್ರತಿದಿನ ನೋವಿನ ಮಾತ್ರೆಯಿಂದ ಇನ್ಫೆಕ್ಷನ್ ಕೂಡ ಆಗಬಹು. ಅಲ್ಲದೇ ಪ್ರಮುಖವಾಗಿ ನೋವಿನ ಮಾತ್ರೆ ಅಡಿಕ್ಷನ್ ಆಗಿರುತ್ತದೆ. ನೋವು ಇಲ್ಲವಾದರೂ ನೋವು ನಿವಾರಕ ಮಾತ್ರೆ ಬೇಕು ಎಂಬ ಭಾವನೆ ಆರಂಭವಾಗುತ್ತದೆ. ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತ ಕೂಡ ಅತಿಯಾದ ಈ ಮಾತ್ರೆ ಸೇವನೆಯಿಂದ ಸಂಭವಿಸುತ್ತದೆ.
ಕಿಡ್ನಿ ಸಮಸ್ಯೆ, ಕಿಡ್ನಿ ವೈಫಲ್ಯವುಂಟಾಗಬಹುದು. ಮಲಬದ್ಧತೆ, ಅತಿಯಾದ ಉಷ್ಣದಿಂದ ಮಲದಲ್ಲಿ ರಕ್ತ ಹೋಗುವಿಕೆ, ಲಿವರ್ ಡ್ಯಾಮೇಜ್, ಮೈಕೈ ಮುಖ ಊದುವಿಕೆ, ಬಿಪಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ ಪ್ರಮುಖವಾಗಿ ನೋವು ನಿವಾರಕ ಮಾತ್ರೆಗಳು ನಮ್ಮ ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯನ್ನು ನಿಲ್ಲಿಸುತ್ತದೆ. ಹಾಗಾಗಿ ನೋವಿನ ಮಾತ್ರೆಗಳು ಮದ್ಯಪಾನಕ್ಕಿಂತ ಅಪಾಯಕಾರಿಯಾಗಿದೆ.
ಆದ್ದರಿಂದ ಸಣ್ಣಪುಟ್ಟ ಮೈಕೈ ನೋವು, ತಲೆ ನೋವು ಇಂತಹ ಸಾಮಾನ್ಯ ವಿಚಾರವಾಗಿ ನೋವು ನಿವಾರಕ ಮಾತ್ರೆ ಸೇವಿಸದಿರುವುದು ಒಳಿತು. ಅತಿಯಾದ ಮಂಡಿ ನೋವು ಅಥವಾ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಾದಾಗ ವೈದ್ಯರ ಸಲಹೆ ಮೇರೆಗೆ ತಾತ್ಕಾಲಿಕವಾಗಿ ಮಾತ್ರ ನೋವು ನಿವಾರಕ ಮಾತ್ರೆ ಸೇವಿಸಬಹುದು ಎಂದು ಸಲಹೆ ನೀಡಿದ್ದಾರೆ.
ನೋವಿನ ಮಾತ್ರೆಗಳು ಎಷ್ಟು ಅಪಾಯಕಾರಿ ಎಂಬುದನ್ನು ಮನಮುಟ್ಟುವಂತೆ ಜನರಿಗೆ ಮನವರಿಕೆ ಮಾಡಿರುವ ಡಾ. ರಾಜು ಅವರ ಆರೋಗ್ಯ ಸಲಹೆಗಳ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ.