ದೆಹಲಿಯ ಲಕ್ಷ್ಮೀನಗರದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮಾವನಿಗೇ ಥಳಿಸಿದ್ದಾರೆ. ಮತ್ತೋರ್ವ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸುವ ಮುನ್ನವೇ ಮಹಿಳಾ ಅಧಿಕಾರಿ ಮಾವನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೂ ಮುನ್ನ ಪೊಲೀಸ್ ಅಧಿಕಾರಿ ಮತ್ತಾಕೆಯ ತಾಯಿ ಇಬ್ಬರೂ ಆ ವೃದ್ಧನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಜಗಳ ನಡೆಯುವ ಸಂದರ್ಭದಲ್ಲೂ ಪೊಲೀಸರು ಸ್ಥಳದಲ್ಲಿಯೇ ಇದ್ದರು. ನಂತರ ಒಬ್ಬರಾದ ಮೇಲೆ ಒಬ್ಬರಂತೆ ಆತನ ಕಪಾಳಕ್ಕೆ ಬಾರಿಸಿದ್ದಾರೆ. ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಮಾವನನ್ನೇ ಥಳಿಸಿದ ಮಹಿಳಾ ಪೋಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ, ಆದ್ರೆ ಆಕೆಯನ್ನು ಇನ್ನೂ ಬಂಧಿಸಿಲ್ಲ. 66 ವರ್ಷದ ವಿಜೇಂದರ್ ಗುಪ್ತಾ ಪತ್ನಿ ವೀಣಾ ಜೊತೆಗೆ ಗರ್ವಾಲಿ ಮೊಹಲ್ಲಾದಲ್ಲಿ ವಾಸವಿದ್ದಾನೆ. ವಿಜೇಂದರ್‌ನ ಸೊಸೆ ಚಂಚಲ್, ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. 2020 ರಲ್ಲಿ ಆಕೆ ಅಂಕುರ್ ಗುಪ್ತಾನನ್ನು ವಿವಾಹವಾಗಿದ್ದಳು.
ಮದುವೆಯಾಗಿ ನಾಲ್ಕು ತಿಂಗಳಲ್ಲೇ ಪತಿ ಪತ್ನಿ ಮಧ್ಯೆ ಜಗಳ ಶುರುವಾಗಿತ್ತು. ನಂತರ ಚಂಚಲ್ ತನ್ನ ಹೆತ್ತವರ ಮನೆಗೆ ಮರಳಿದ್ದಳು. ಭಾನುವಾರ ಬೆಳಗ್ಗೆ ತನ್ನ ತಾಯಿಯೊಂದಿಗೆ ವಿಜೇಂದರ್ ಮನೆಗೆ ಬಂದ ಚಂಚಲ್ ಬಾಗಿಲು ಬಂದ್ ಮಾಡಿ ಹಲ್ಲೆ ನಡೆಸಿದ್ದಾಳೆ. ವೃದ್ಧ ದಂಪತಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಇದುವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.