
ಯುವಕನೊಬ್ಬ ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ರಾತ್ರಿ ವೇಳೆ ಕದ್ದಿದ್ದು, ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.
ಗ್ವಾಲಿಯರ್ ನ ಬಡಾವಣೆಯೊಂದಕ್ಕೆ ಮಧ್ಯರಾತ್ರಿ ಪ್ರವೇಶಿಸಿರುವ ಈ ಯುವಕ ಪೈಪ್ ಮೂಲಕ ಮನೆಗಳ ಮೇಲೆ ಏರಿ ಒಳ ಉಡುಪು ಕದ್ದಿದ್ದಾನೆ. ಈ ಘಟನೆ ಹಲವು ದಿನಗಳಿಂದ ನಡೆಯುತ್ತಿದ್ದರೂ ಸಹ ಮುಜುಗರದ ಕಾರಣಕ್ಕೆ ಯಾರೂ ದೂರು ದಾಖಲಿಸಿರಲಿಲ್ಲ.
ಇತ್ತೀಚೆಗೆ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು ತಮ್ಮ ಪತ್ನಿಯ ಒಳ ಉಡುಪುಗಳನ್ನು ಕಳವು ಮಾಡಲಾಗಿದೆ ಎಂದು ತಿಳಿಸಿದ್ದರು. ಇದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಯುವಕನ ಕೃತ್ಯ ಬೆಳಕಿಗೆ ಬಂದಿದೆ.
ಈತ ಸ್ಥಳೀಯ ನಿವಾಸಿಯೇ ಎನ್ನಲಾಗಿದ್ದು, ಆಕಾಶ್ ವರ್ಮಾ ಎಂದು ಗುರುತಿಸಿರುವ ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಮೀರತ್ ನಲ್ಲಿಯೂ ಕೆಲ ದಿನಗಳ ಹಿಂದೆ ಇಂಥವುದೇ ಘಟನೆ ನಡೆದಿದ್ದು ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು.