ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಜ್ಯೂನಿಯರ್ ಲೈನ್ ಮ್ಯಾನ್ ಹುಕ್ಕೇರಿಯ ಗಿರೀಶ್ ಬನಾಜ್, ಬಿ.ಕೆ ಗ್ರಾಮದ ಬೀರಪ್ಪ ಲಕ್ಷ್ಮಣ ಹಣಗಂಡಿ ಹಾಗೂ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಶಿವಾನಂದ ದುಂಡಪ್ಪ ಹಳ್ಳೂರ ಎಂದು ಗುರುತಿಸಲಾಗಿದೆ.
ಆರೋಪಿ ಗಿರೀಶ್ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಉತ್ತರ ತಯಾರಿಸಿ ಅಭ್ಯರ್ಥಿಗಳಿಗೆ ಹೇಳಲು ಸಹಕರಿಸಿದ್ದನು. ಆರೋಪಿ ಲಕ್ಷ್ಮಣ್ ಸ್ಮಾರ್ಟ್ ವಾಚ್ ಖರೀದಿಸಿ ಅಭ್ಯರ್ಥಿಗಳಿಗೆ ನೀಡಿದ್ದ. ಮತ್ತೋರ್ವ ಆರೋಪಿ ಶಿವಾನಂದ್ ಎಲೆಕ್ಟ್ರಾನಿಕ್ ಡಿವೈಸ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದ. ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಶಿವಾನಂದ್ ಬಳಿ ಇದ್ದ 5 ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.