ವರುಣನ ಆರ್ಭಟಕ್ಕೆ ತತ್ತರಿಸಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಮಳೆ ನಿಂತರೆ ಸಾಕಪ್ಪ ಎನ್ನುತ್ತಿದ್ದಾರೆ. ಆದರೆ ಹವಾಮಾನ ಇಲಾಖೆ ಸೆಪ್ಟೆಂಬರ್ 9 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದ್ದು ಆತಂಕಕ್ಕೆ ಕಾರಣವಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ನೀರು ಎರಡರಿಂದ ಮೂರು ಅಡಿಗಳಷ್ಟು ನಿಂತಿದ್ದು, ಇದರ ಪರಿಣಾಮ ವಾಹನ ಸಂಚಾರ ದುಸ್ತರವಾಗಿದೆ. ಹೀಗಾಗಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಆದರೆ ಕಚೇರಿಗೆ ತೆರಳುವ ಅನಿವಾರ್ಯತೆಯಲ್ಲಿರುವ ಐಟಿ ಉದ್ಯೋಗಿಗಳು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಕೆಲವು ಉದ್ಯೋಗಿಗಳು ಟ್ರ್ಯಾಕ್ಟರ್ ಏರಿ ಕಚೇರಿಗೆ ತೆರಳಿದ್ದು, ಇನ್ನು ತಮ್ಮ ಸ್ವಂತ ವಾಹನದ ಮೂಲಕ ತೆರಳಲು ಹರಸಾಹಸ ಮಾಡಿದ ಹಲವರು ಎಂಜಿನ್ ಮಟ್ಟಕ್ಕೆ ನೀರು ಬಂದ ಕಾರಣ ಅಸಹಾಯಕರಾಗಿ ರಸ್ತೆಯಲ್ಲೇ ನಿಂತಿದ್ದಾರೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಒದಗಿ ಬಂದ ಅವಸ್ಥೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡ ನೆಟ್ಟಿಗರು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಹಾಗೂ ಸರ್ಕಾರವನ್ನು ಶಪಿಸುತ್ತಿದ್ದಾರೆ.