ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ಸೇರಿದಂತೆ ಮೂವರಿಗೆ ಈಗ ಸಂಕಷ್ಟ ಎದುರಾಗಿದೆ. ಇವರುಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮುರುಘಾ ಶ್ರೀಗಳು ಬಂಧನಕ್ಕೊಳಗಾಗಿದ್ದ ವೇಳೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಂಗನಾಥ್, ಆಸ್ಪತ್ರೆಯ ಸರ್ಜನ್ ಡಾ. ಬಸವರಾಜ್ ಹಾಗೂ ಕಾರಾಗೃಹ ಅಧಿಕಾರಿ ಎಂ.ಎಂ. ಮರಕಟ್ಟಿ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ. ಅಲ್ಲದೆ ಪ್ರಭಾವಿ ಆರೋಪಿಯ ರಕ್ಷಣೆಗೆ ಇವರುಗಳು ಮುಂದಾಗಿದ್ದು, ಇವರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಮ್ಮ ದೂರಿನಲ್ಲಿ ವೆಂಕಟೇಶ್ ಮನವಿ ಮಾಡಿದ್ದಾರೆ.
ಕಾರಾಗೃಹದಲ್ಲಿದ್ದ ಮುರುಘಾ ಶ್ರೀಗಳನ್ನು ಎದೆ ನೋವಿನ ಕಾರಣಕ್ಕೆ ತರಾತುರಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತಂದಿಲ್ಲ. ಬಳಿಕ ಆಸ್ಪತ್ರೆಯಲ್ಲಿ ಶ್ರೀಗಳಿಗೆ ತೀವ್ರತರವಾದ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ದಾಖಲೆ ಸೃಷ್ಟಿಸಿ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕಳುಹಿಸಲು ಹುನ್ನಾರ ನಡೆಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದ್ದು, ಹೀಗಾಗಿ ಇವರುಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ.