ಸಿಇಟಿ ರ್ಯಾಂಕ್ ಪ್ರಕಟಿಸುವ ವೇಳೆ ತಮ್ಮನ್ನು ಪರಿಗಣಿಸಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ರಿಪೀಟರ್ಸ್ ವಿದ್ಯಾರ್ಥಿಗಳು ತಮ್ಮ ಪರ ತೀರ್ಪು ಬಂದ ಕಾರಣ ಸಂತಸಗೊಂಡಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ, ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಈ ವಿದ್ಯಾರ್ಥಿಗಳಿಗೆ ಮತ್ತೆ ಆತಂಕ ಶುರುವಾಗಿದೆ.
ಸೋಮವಾರದಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ತಮ್ಮ ನಿವಾಸದಲ್ಲಿ ಕೆಇಎ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದ ಬಂದಿದೆ.
ಸಭೆ ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಈ ಬಾರಿ 25,000 ರಿಪೀಟರ್ಸ್ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ಹೀಗಾಗಿ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಆದರೆ ಹೈಕೋರ್ಟ್ ರ್ಯಾಂಕ್ ರದ್ದು ಮಾಡಿರುವುದರಿಂದ ಒಂದೂವರೆ ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.