ಅದು ನನ್ನಿಂದಾಗದು, ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗೊಣಗುವುದೇ ಅನೇಕರ ಲಕ್ಷಣ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲೇ ಸೋತು ಬಿಡುತ್ತಾರೆ. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಕೆಲಸ ಆರಂಭಿಸಿ ಹೆಣಗಾಡುತ್ತಾರೆ. ಇದನ್ನೆಲ್ಲಾ ಬಿಟ್ಟಾಕಿ ಹೊಸ ಹುಮ್ಮಸ್ಸು, ಉತ್ಸಾಹದೊಂದಿಗೆ ಮುಂದಡಿ ಇಡಿ. ನಿಮ್ಮ ಕೆಲಸ ತಾನೇ ತಾನಾಗಿ ಸುಲಭವೆನಿಸುತ್ತದೆ.
ಏನೇ ಕೆಲಸ ಮಾಡುವ ಮೊದಲು ಚಿಂತನೆ ಮಾಡೇ ಮಾಡ್ತೀರಿ. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ನಿಮ್ಮಲ್ಲಿ ಸಹಜವಾಗಿ ಸುಳಿದಾಡುತ್ತವೆ.
ಚಿಂತೆ ಬಗ್ಗೆಯೇ ಹೆಚ್ಚಿನವರು ತಲೆ ಕೆಡಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಬಂದದ್ದು ಬರಲಿ, ಆದದ್ದು ಆಗಲಿ ಎಂದು ಕೆಲಸವನ್ನಾರಂಭಿಸುತ್ತಾರೆ. ಇಂತಹವರು ಸಾಮಾನ್ಯವಾಗಿ ಯಶಸ್ಸಿನತ್ತ ಸಾಗುತ್ತಾರೆ. ಋಣಾತ್ಮಕ ಚಿಂತನೆಗಳು ಹಿಂದುಳಿಯುವಂತೆ ಮಾಡುತ್ತವೆ. ಅಂತಹ ಚಿಂತನೆಗಳಿಂದ ಆಲಸ್ಯತನ ಬಂದು ಕೆಲಸದ ಮೇಲಿನ ಕಾಳಜಿ ಕಡಿಮೆಯಾಗಬಹುದು.
ನೀವು ಮಾಡುವ ಒಳ್ಳೆಯ ಕೆಲಸದಲ್ಲಿ ಶ್ರದ್ಧೆ, ಕಾಳಜಿ ಇದ್ದಲ್ಲಿ ಹೊಸ ಹುಮ್ಮಸ್ಸು ಬರುತ್ತದೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ವಿಶ್ವಾಸ ಹೆಚ್ಚಾಗುತ್ತದೆ. ಇದೇ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಯಶಸ್ಸಿನ ದಾರಿಯಲ್ಲಿ ಸಾಗಲು ಸಿದ್ಧರಾಗಿ.