ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜ್‌ಪೂತ್ ಸಾವನ್ನು ಇಂದಿಗೂ ಅಭಿಮಾನಿಗಳು ಅರಗಿಸಿಕೊಂಡಿಲ್ಲ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಸುಶಾಂತ್‌ರ ದಿಢೀರ್ ಸಾವು ಇಡೀ ದೇಶವನ್ನೇ ತಲ್ಲಣಗೊಳಿಸಿಬಿಟ್ಟಿತ್ತು.
ಸುಶಾಂತ್ ಸಾವಿಗೆ ಪ್ರಮುಖ ಕಾರಣ ಮಾನಸಿಕ ಅನಾರೋಗ್ಯ ಅಥವಾ ಖಿನ್ನತೆ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಮೆಂಟಲ್ ಹೆಲ್ತ್ ಅನ್ನೋದು ಯಾರನ್ನು ಬೇಕಾದ್ರೂ ಯಾವಾಗ ಬೇಕಾದ್ರೂ ಬಲಿ ಪಡೆಯಬಹುದು ಅನ್ನೋದು ಸುಶಾಂತ್ ಸಾವಿನಿಂದ ಇಡೀ ಸಮಾಜಕ್ಕೇ ಅರಿವಾಗಿದೆ.
34ರ ಹರೆಯದ ಸುಶಾಂತ್ 6 ತಿಂಗಳಿನಿಂದ ಖಿನ್ನತೆಗೆ ತುತ್ತಾಗಿದ್ದರು. ಚಿಕಿತ್ಸೆಯನ್ನೂ ಪಡೆದುಕೊಳ್ತಾ ಇದ್ರು. ಆದ್ರೆ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸುಶಾಂತ್ ತಮ್ಮ ಬದುಕನ್ನೇ ಕೊನೆಗಾಣಿಸಿಕೊಂಡಿದ್ದರು. ವೈದ್ಯರು ಹೇಳುವ ಪ್ರಕಾರ ಖಿನ್ನತೆ ಒಂದು ಗುಪ್ತ ಕಾಯಿಲೆ, ಅದರ ಪರಿಣಾಮವೂ ವಿಭಿನ್ನವಾಗಿರುತ್ತದೆ. ಮನರಂಜನಾ ಉದ್ಯಮದಲ್ಲಿ ಸಾಕಷ್ಟು ಸ್ನೇಹಿತರು, ಸದಾ ಪ್ರಚಾರ, ಜನರೊಂದಿಗೆ ಸಂಪರ್ಕ ಹೀಗೆ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರೂ ಆಂತರಿಕವಾಗಿ ಅವರ ಮೇಲೆ ಒತ್ತಡವಿರುತ್ತದೆ ಎನ್ನುತ್ತಾರೆ ವೈದ್ಯರು.
ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಎಂಟರ್ಟೈನ್ಮೆಂಟ್ ಉದ್ಯಮದಲ್ಲಿ ಹಲವಾರು ಯುವ ಮತ್ತು ಭರವಸೆಯ ಪ್ರತಿಭೆಗಳನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಇಂಡಸ್ಟ್ರಿಯಲ್ಲಿರುವವರಿಗೆ ಏನು ತೊಂದರೆಯಾಗುತ್ತಿದೆ ಎಂಬ ಬಗ್ಗೆ ಮಾತನಾಡಲು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಗಳಾಗುತ್ತಿಲ್ಲ. ಕೆಲವೊಮ್ಮೆ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನಗಳೇ ನಡೆಯುವುದಿಲ್ಲ. ಲಾಕ್‌ಡೌನ್, ನಿರ್ಬಂಧಿತ ಜೀವನಶೈಲಿ, ಪ್ರತ್ಯೇಕತೆಯ ಭಾವನೆ ಹೀಗೆ ಹಲವು ಕಾರಣಗಳು ಇದಕ್ಕಿರಬಹುದು.
ಪವಿತ್ರ ರಿಶ್ತಾ ಎಂಬ ಧಾರಾವಾಹಿಯ ಮೂಲಕ ಸುಶಾಂತ್ ಪ್ರಸಿದ್ಧಿ ಪಡೆದರು. ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಕಾಯ್ ಪೋ ಚೆ, ಎಂ.ಎಸ್. ಧೋನಿ, ಕೇದಾರ್‌ನಾಥ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುಶಾಂತ್, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥಾಹಂದರವುಳ್ಳ ʼಚಿಚೋರೆʼ ಚಿತ್ರದಲ್ಲೂ ಅಭಿನಯಿಸಿದ್ದರು. ಆದ್ರೆ ಸುಶಾಂತ್ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬರಬಹುದು ಅನ್ನೋ ಊಹೆ ಕೂಡ ಯಾರಿಗೂ ಇರಲಿಲ್ಲ. ಹಾಗಾಗಿ ವೈದ್ಯರು ಹೇಳುವ ಪ್ರಕಾರ ನಮ್ಮ ಮನಸ್ಸಿನ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಬೇಕು.
ಭಾವನೆಗಳನ್ನು ಅದುಮಿಟ್ಟುಕೊಂಡಲ್ಲಿ ಇಂತಹ ನಿರ್ಧಾರಗಳಿಗೆ ಮನಸ್ಸು ಪ್ರೇರೇಪಿಸುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಲು ಬಹುತೇಕರು ಹಿಂಜರಿಯುತ್ತಾರೆ. ಅನೇಕರಿಗೆ ಇದೊಂದು ಕಳಂಕವೆಂಬ ಭಾವನೆಯೂ ಇರಬಹುದು. ಮಾನಸಿಕ ಆರೋಗ್ಯವು ತುಂಬಾ ಗಂಭೀರವಾದ ವಿಷಯವಲ್ಲ ಎಂಬುದು ಜನರ ಮನಃಸ್ಥಿತಿ. ಈ ಮೌನ ಮತ್ತು ಕಳಂಕಗಳನ್ನು ನಾವು ಮುರಿಯಬೇಕು ಅನ್ನೋದಕ್ಕೆ ಸುಶಾಂತ್ ಸಾವು ನಿದರ್ಶನ. ಮಾನಸಿಕ ಆರೋಗ್ಯವು ನಿಮ್ಮ ಆದ್ಯತೆಯಾಗಿರಬೇಕು. ಕೆಲವರು ಆತ್ಮಹತ್ಯಾ ಪ್ರವೃತ್ತಿಯನ್ನು ಸೂಚಿಸುವ ಚಿಹ್ನೆಗಳನ್ನು ವ್ಯಕ್ತಪಡಿಸಿದರೆ ಅದನ್ನು ಗಮನಿಸಬೇಕು.
ಆತ್ಮಹತ್ಯೆಯ ಬಗ್ಗೆ ಮಾತನಾಡುವುದು, ಬಂದೂಕು, ಮಾತ್ರೆಗಳಂತಹ ಸಾಧನಗಳನ್ನು ಹುಡುಕುವುದು, ಆತ್ಮಹತ್ಯೆಗೆ ಬಳಸಬಹುದಾದ ಇತರ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದ್ರೆ ಅದನ್ನು ತಡೆಯುವ ಪ್ರಯತ್ನ ಮಾಡಬೇಕು. ಸ್ವಯಂ-ಅಸಹ್ಯ, ಅಮೂಲ್ಯವಾದ ಆಸ್ತಿ ನೀಡುವುದು ಅಥವಾ ಕುಟುಂಬ ಸದಸ್ಯರಿಗೆ ವ್ಯವಸ್ಥೆ ಮಾಡುವುದು ಆತ್ಮಹತ್ಯೆಯ ಕೆಲವು ಸಂಭಾವ್ಯ ಸೂಚನೆಗಳು. ಖಿನ್ನತೆ, ಸೈಕೋಸಿಸ್ ಅಥವಾ ಆತಂಕದ ಚಿಹ್ನೆಗಳಿವು. ಉದ್ಯಮದಲ್ಲಿ ನಷ್ಟ, ಕೆಲಸದಲ್ಲಿ ತೊಂದರೆ, ಸಾಮಾಜಿಕ ಬೆಂಬಲದ ಕೊರತೆ, ವೈಯಕ್ತಿಕ ಬಿಕ್ಕಟ್ಟು ಅಥವಾ ಜೀವನದ ಒತ್ತಡ ಇವೆಲ್ಲವೂ ಆತ್ಮಹತ್ಯೆಗೆ ಕಾರಣವಾಗಬಹುದು.