ಬೆಂಗಳೂರು: ರಾಜಧಾನಿ ಬೆಂಗಳೂರಿಗರು ವರುಣಾರ್ಭಟಕ್ಕೆ ತತ್ತರಿಸಿದ್ದು, ಬೆಂಗಳೂರಿನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ಅವಾಂತರದ ನಡುವೆ ಸಿಲಿಕಾನ್ ಸಿಟಿ ಜನರಿಗೆ ಕುಡಿಯುವ ನೀರಿಗೂ ಇದೀಗ ಸಂಕಷ್ಟ ಎದುರಾಗಿದೆ.
ಬೆಂಗಳೂರಿಗೆ ಎರಡು ದಿನಗಳ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಇಂದು ಹಾಗೂ ನಾಳೆ ಎರಡು ದಿನ ಕಾವೇರಿ ನೀರು ಸರಬರಾಜು ಇರುವುದಿಲ್ಲ. ಭಾರಿ ಮಳೆಯಿಂದಾಗಿ ಕುಡಿಯುವ ನೀರು ಘಟಕ ಜಲಾವೃತಗೊಂಡು ಸಮಸ್ಯೆಯುಂಟಾಗಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಗ್ರಾಮದಲ್ಲಿ ಕಾವೇರಿ ನೀರು ಪೂರೈಕೆ ಘಟಕದಲ್ಲಿ ನೀರು ತುಂಬಿದ್ದು, ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿವೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಕಾವೇರಿ ನೀರು ಪೂರೈಕೆ ಅಸಾಧ್ಯವಾಗಿದ್ದು, ಎರಡು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.