ಭಾರತದಲ್ಲಿ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. 2021ರಲ್ಲಿ ಅತ್ಯಧಿಕ ಆತ್ಮಹತ್ಯಾ ಸಾವು ಸಂಭವಿಸಿದೆ. ಸುಮಾರು 1.64 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಸರಾಸರಿ ದಿನಕ್ಕೆ 450 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಪ್ರತಿ ಗಂಟೆಗೆ 18 ಮಂದಿ ಸಾವಿಗೆ ಶರಣಾಗಿದ್ದಾರೆ.
ಅಂಕಿ-ಅಂಶಗಳ ಪ್ರಕಾರ ಈವರೆಗೆ ಅತಿ ಹೆಚ್ಚು ಆತ್ಮಹತ್ಯೆ ಕೇಸ್‌ಗಳು ದಾಖಲಾಗಿರೋದು 2021ರಲ್ಲಿ. ಅಧಿಕೃತ ಮಾಹಿತಿಯ ಪ್ರಕಾರ ಆತ್ಮಹತ್ಯೆಯಿಂದ ಸಾವನ್ನಪ್ಪಿದವರಲ್ಲಿ ಸುಮಾರು 1.19 ಲಕ್ಷ ಪುರುಷರು, 45,026 ಮಹಿಳೆಯರು ಮತ್ತು 28 ಮುಂಗಳಮುಖಿಯರಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಈ ಡೇಟಾವನ್ನು ಪ್ರಕಟಿಸಿದೆ.
ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲಿನ ವರ್ಷಗಳಿಗೆ ಹೋಲಿಸಿದರೆ 2020 ಮತ್ತು 2021ರಲ್ಲಿ ಆತ್ಮಹತ್ಯೆ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿಯ ಅಂಕಿಅಂಶಗಳ ಪ್ರಕಾರ 2020 ರಲ್ಲಿ, ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 1.53 ಲಕ್ಷ ಇತ್ತು. 2019 ರಲ್ಲಿ ಆತ್ಮಹತ್ಯೆ ಸಾವಿನ ಸಂಖ್ಯೆ 1.39 ಲಕ್ಷ, 2018 ರಲ್ಲಿ 1.34 ಲಕ್ಷ, 2017 ರಲ್ಲಿ 1.29 ಲಕ್ಷ ಸಾವುಗಳು ದಾಖಲಾಗಿದ್ದವು.
1984 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಆತ್ಮಹತ್ಯೆ ಸಾವಿನ ಸಂಖ್ಯೆ 50,000 ದಾಟಿತ್ತು. 1991 ರಲ್ಲಿ ಅದು 75,000ಕ್ಕೆ ತಲುಪಿತ್ತು. 1998 ರಲ್ಲಿ ಆತ್ಮಹತ್ಯೆ ಸಾವುಗಳ ಸಂಖ್ಯೆ 1 ಲಕ್ಷದ ಗಡಿ ದಾಟಿತು. ಆ ವರ್ಷ 1.04 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಔದ್ಯೋಗಿಕ ಅಥವಾ ವೃತ್ತಿ ಸಮಸ್ಯೆ, ಪ್ರತ್ಯೇಕತೆಯ ಭಾವನೆ, ನಿಂದನೆ, ಹಿಂಸೆ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆಗಳು, ಮದ್ಯದ ಚಟ, ಆರ್ಥಿಕ ನಷ್ಟ, ದೀರ್ಘಕಾಲದ ನೋವು ಹೀಗೆ ಹಲವು ಕಾರಣಗಳಿಂದ ಮನನೊಂದು ಜನರು ಸಾವಿನ ನಿರ್ಧಾರಕ್ಕೆ ಬರುತ್ತಿದ್ದಾರೆ.