ಶಿವಮೊಗ್ಗ: ಮನೆಯ ಮುಂಭಾಗ ನಿಲ್ಲಿಸಿದ ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸಮೀಪದ ವಿರುಪನಕೊಪ್ಪ ಹಾಗೂ ಕೋಟೆಗಂಗೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ವಿರುಪಿನ ಕೊಪ್ಪ ಗ್ರಾಮದ ವೆಂಕಟೇಶ್ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ಮನೆಯ ಮುಂಭಾಗ ಏನೋ ಶಬ್ದವಾಗುತ್ತಿದೆ ಎಂದು ಮನೆಯ ಹೊರ ಬಂದು ನೋಡಿದಾಗ ದ್ವಿಚಕ್ರ ವಾಹನ ಹೊತ್ತಿ ಉರಿಯುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಆಗ ಅಕ್ಕ ಪಕ್ಕದ ಮನೆಯವರು ಬಂದು ಬೆಂಕಿ ನಂದಿಸಿದ್ದಾರೆ.
ಅದೇ ಗ್ರಾಮದ ಸಾದಿಕ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಹಾಗೂ ಕೋಟೆಗಂಗೂರಿನ ಅಜ್ಗರ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನಗಳಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮೂರು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದೆ. ಈ ಸಂಬಂಧ ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.