ಬೆಂಗಳೂರು: ಅಹವಾಲು ಹಿಡಿದು ಬಂದ ಮಹಿಳೆಯ ಮೇಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ದರ್ಪ ಮೆರೆದ ಘಟನೆ ಬೆಳಕಿಗೆ ಬಂದಿದೆ.
ಶಾಸಕರು ವರ್ತೂರು ಕೆರೆ ಕೋಡಿ ವೀಕ್ಷಣೆಗೆ ತೆರಳಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದಿದ್ದಾರೆ ಈ ವೇಳೆ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯನ್ನು ನಿಂದಿಸಿದ್ದಲ್ಲದೇ ಬೈದಿದ್ದಾರೆ ಎನ್ನಲಾಗಿದೆ.
ಮಹಿಳೆಯಿಂದ ಮನವಿ ಪತ್ರ ಕಸಿದುಕೊಂಡು ಆವಾಜ್ ಹಾಕಿದ್ದಾರೆ. ಸುಮ್ನೆ ಇರು ಇಲ್ಲಾ ಅಂದ್ರೆ ಬೇರೆ ಭಾಷೆ ಬರುತ್ತೆ, ನ್ಯಾಯ ಕೇಳಲು ಬಂದಿದ್ದೇನೆ ಎನ್ನಲು ನಾಚಿಕೆಯಾಗಲ್ವಾ?… ಒದ್ದು ಒಳಗಡೆ ಹಾಕ್ತೀನಿ ಎಂದು ಬಾಯಿಗೆ ಬಂದಂತೆ ಗದರಿದ್ದಾರೆ. ಈ ವೇಳೆ ಮಹಿಳೆ ನಾನು ನ್ಯಾಯ ಕೇಳಲು ಬಂದಿದ್ದೀನಿ ಅನಗತ್ಯವಾಗಿ ಯಾಕೆ ಅಗೌರವವಾಗಿ ಮಾತನಾಡುತ್ತೀರಿ ಎಂದು ಕೇಳಿದ್ದಾರೆ. ಈ ವೇಳೆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು ಗಂಟೆಗಟ್ಟಲೆ ಕೂರಿಸಿ ಕಿರುಕುಳ ನೀಡಿದ್ದಾರೆ. ಯಾವುದೇ ದೂರು ಇಲ್ಲದಿದ್ದರೂ ಠಾಣೆಯಲ್ಲಿ ಗಂಟೆ ಗಟ್ಟಲೇ ಮಹಿಳೆಯನ್ನು ಕೂರಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.