ವೈದ್ಯರುಗಳಿಗೆ ತಮ್ಮ ಕಂಪನಿಯ ಉತ್ಪನ್ನಗಳನ್ನೇ ಶಿಫಾರಸ್ಸು ಮಾಡುವ ಸಲುವಾಗಿ ಔಷಧ ತಯಾರಿಕಾ ಕಂಪನಿಗಳು ದುಬಾರಿ ಗಿಫ್ಟ್, ವಿದೇಶ ಪ್ರವಾಸ, ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸುವ ಖರ್ಚು ವೆಚ್ಚ ನೋಡಿಕೊಳ್ಳುವುದು ಸೇರಿದಂತೆ ಹಲವು ವಿಧಾನಗಳನ್ನು ಅನುಸರಿಸುತ್ತವೆ.
ಇತ್ತೀಚೆಗೆ ಅಧಿಕಾರಿಗಳು ಡೋಲೋ ಮಾತ್ರೆ ಉತ್ಪಾದಕ ಸಂಸ್ಥೆಯ ಮೇಲೆ ದಾಳಿ ನಡೆಸಿದ ವೇಳೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ವೈದ್ಯರಿಗೆ ತಮ್ಮ ಕಂಪನಿ ಉತ್ಪನ್ನ ಶಿಫಾರಸ್ಸು ಮಾಡುವ ಸಲುವಾಗಿ ವ್ಯಯ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ವೈದ್ಯರಿಗೆ ದುಬಾರಿ ಗಿಫ್ಟ್ ನೀಡುವ ಔಷಧ ತಯಾರಿಕಾ ಕಂಪನಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ನಿಯಮಾವಳಿಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದ್ದು, ತಮ್ಮ ಕಂಪನಿಯ ಉತ್ಪನ್ನಗಳ ಪ್ರಚಾರಕ್ಕೆ ಔಷಧ ತಯಾರಿಕಾ ಕಂಪನಿಗಳು ದುಬಾರಿ ಕೊಡುಗೆಗಳ ಮೂಲಕ ಆಮಿಷ ಒಡ್ಡುವ ಬದಲು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಫಾರ್ಮಸ್ಯುಟಿಕಲ್ ಇಲಾಖೆ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.