ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಬಡವರಿಗೆ ನೀಡುವ ಒಂದು ಕಿಲೋ ಅಕ್ಕಿಗೆ 28 ರೂಪಾಯಿಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬೀರಕೂರಿನಲ್ಲಿ ಅಕ್ಕಿ ವಿತರಿಸುತ್ತಿರುವ ವಿಧಾನ ಪರಿಶೀಲಿಸಿದ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಒಂದು ಕಿಲೋ ಅಕ್ಕಿಗೆ 28 ರೂಪಾಯಿಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ. ಯೋಜನೆಯ ಅನುಷ್ಠಾನದ ಹಿಂದೆ ಸರ್ಕಾರದ ಪ್ರಯತ್ನಗಳ ಬಗ್ಗೆ ತಿಳಿಸುವ ಜವಾಬ್ದಾರಿ ಸ್ಥಳೀಯ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೇವಲ ಮೂರು ರೂಪಾಯಿ ನೀಡುತ್ತಿದೆ. ಕೇಂದ್ರದಿಂದ 28 ರೂ. ನೀಡುತ್ತಿದೆ. ಆಹಾರ ಧಾನ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಜನರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಅಂಗಡಿಯಲ್ಲಿ ಜನರಿಗೆ ಅಕ್ಕಿ ವಿತರಣೆಯ ವಿವರಗಳನ್ನು ಒದಗಿಸುವಂತೆ ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೀಶ್ ವಿ ಪಾಟೀಲ್ ಅವರಿಗೆ ಸೂಚಿಸಿದರು.
ಜಹೀರಾಬಾದ್ ಲೋಕಸಭಾ ಕ್ಷೇತ್ರಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ನಿರ್ಮಲಾ ಸೀತಾರಾಮನ್ ವಿವಿಧ ಯೋಜನೆಗಳ ಅನುಷ್ಠಾನ ಪರಿಶೀಲಿಸುತ್ತಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.