ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಮುರುಘಾಶ್ರೀಗಳನ್ನು ಯಾವುದೇ ಮಾಹಿತಿ ನೀಡದೇ ಆಸ್ಪತ್ರೆಗೆ ದಾಖಲಿಸಿರುವ ಕ್ರಮವನ್ನು ನ್ಯಾಯಾಧೀಶರು ಪ್ರಶ್ನಿಸಿದ್ದು, ತಕ್ಷಣ ಆರೋಪಿ ಶ್ರೀಗಳನ್ನು ಕೋರ್ಟ್ ಗೆ ಹಾಜರು ಪಡಿಸುವಂತೆ ಜೈಲಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಮುರುಘಾಶ್ರೀಗಳು ಚಿತ್ರದುರ್ಗದ ಕಾರಾಗೃಹದಲ್ಲಿ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಸಮಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡುವ ಪ್ರಯತ್ನ ಕೂಡ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್, ಕಾರಾಗೃಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕೋರ್ಟ್ ಗೆ ಮಾಹಿತಿ ನೀಡದೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೇಗೆ ಎಂದು ಪ್ರಶ್ನಿಸಿದೆ.
ಆರೋಪಿ ಮುರುಘಾಶ್ರೀಗಳನ್ನು ತಕ್ಷಣ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರು ಪಡಿಸುವಂತೆ ಜೈಲಧಿಕಾರಿ ಎಂ.ಎಂ.ಮರಕಟ್ಟಿ ಅವರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಈ ನಡುವೆ ಮುರುಘಾಶ್ರೀಗಳನ್ನು ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರ್ಟ್ ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.