ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಕಡು ವಿರೋಧಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೀದಿಯನ್ನು ಮಣಿಸಿ ಅಧಿಕಾರಕ್ಕೆ ಏರಲು ಬಿಜೆಪಿ ಸಾಕಷ್ಟು ಪ್ರಯತ್ನಿಸಿತ್ತಾದರೂ ಯಾವುದೇ ಫಲ ಸಿಗಲಿಲ್ಲ.
ಇದೀಗ ಮಮತಾ ಬ್ಯಾನರ್ಜಿ ಬಿಜೆಪಿಯ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಹೊಗಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣರಾಗಿದ್ದಾರೆ. ಅಲ್ಲದೆ ಇದು ಹಲವು ಚರ್ಚೆಗಳಿಗೂ ಕಾರಣವಾಗಿದೆ.
ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಕೆಟ್ಟದ್ದು ಎಂದು ನಾವುಗಳು ಹೇಳಲಾಗದು. ಅಲ್ಲಿಯೂ ಬಹಳಷ್ಟು ಮಂದಿ ಒಳ್ಳೆಯವರಿದ್ದು, ಬಿಜೆಪಿಯವರ ರಾಜಕೀಯವನ್ನು ವಿರೋಧಿಸುತ್ತಾರೆ ಎಂದು ದೀದಿ ಹೇಳಿದ್ದಾರೆ.
ಇದಕ್ಕೆ ಕಿಡಿ ಕಾರಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, 2003 ರಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ಮಮತಾ ಬ್ಯಾನರ್ಜಿ ದೇಶಭಕ್ತ ಸಂಘಟನೆ ಎಂದಿದ್ದರು. ಆರ್ ಎಸ್ ಎಸ್ ಕೂಡ ಅವರನ್ನು ದುರ್ಗಿ ಎಂದು ಹಾಡಿ ಹೊಗಳಿದ್ದು, ಇದು ಅವಕಾಶವಾದಿ ರಾಜಕಾರಣ ಎಂದು ಹೇಳಿದ್ದಾರೆ.