ವಸ್ತುವನ್ನ ಬಳಕೆ ಮಾಡಿ ಅದನ್ನ ಬಿಸಾಕುವುದು ಮನುಷ್ಯನ ಸಹಜ ಸ್ವಭಾವ. ಆದರೆ ಇದೇ ಸ್ವಭಾವವನ್ನ ವೈವಾಹಿಕ ಜೀವನದಲ್ಲಿ ಅಳವಡಿಸಿಕೊಳ್ಳಬಾರದು. ಇದು ಸರಿಯಾದ ಮಾರ್ಗವಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ವಿಚ್ಛೇದನ ಕೇಸ್ ಒಂದನ್ನ ಇತ್ಯರ್ಥ ಮಾಡುವ ಸಂದರ್ಭದಲ್ಲಿ ಈ ಮಾತನ್ನ ಕೋರ್ಟ್ ಹೇಳಿದೆ. 51 ವರ್ಷ ವಯಸ್ಸಿನ ವ್ಯಕ್ತಿಯ ವಿಚ್ಛೇದನದ ಮನವಿಯನ್ನ ತಿರಸ್ಕರಿಸಿ, ಕೆಲವು ವಿಚಾರಗಳನ್ನ ಅವಲೋಕನ ಮಾಡುವಂತೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ. ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರ ವಿಭಾಗೀಯ ಪೀಠವು, ವೈವಾಹಿಕ ಕ್ರೌರ್ಯ ಆರೋಪದ ಮೇಲೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಮನವಿಯನ್ನು ತಿರಸ್ಕರಿಸಿದೆ.
ಒಂದು ಕಾಲದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು ಎಂದು ನ್ಯಾಯಮೂರ್ತಿ ಸೋಫಿ ಥಾಮಸ್ ಅವರು ಬರೆದಿರುವ ನ್ಯಾಯಾಲಯದ ಆದೇಶವು ಹೇಳುತ್ತದೆ, ಆದರೆ ಪ್ರಸ್ತುತ ದಿನಗಳಲ್ಲಿ ದುರ್ಬಲ ಅಥವಾ ಸ್ವಾರ್ಥ ಮನಸ್ಸಿನವರಿಂದಲೇ ಹೆಚ್ಚು ತುಂಬಿ ಹೋಗಿದೆ. ಜನರು ತಮ್ಮ ವೈವಾಹಿಕ ಜೀವನವನ್ನ ಹಿಂದೆ ಮುಂದೆ ನೋಡದೇ ಮುರಿದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ವೈವಾಹಿಕ ಜೀವನದ ಬಗ್ಗೆ ಇರುವ ನಿರಾಸೆ ಹಾಗೂ ಮಕ್ಕಳ ಜವಾಬ್ದಾರಿ ಎಂದು ಅಭಿಪ್ರಾಯಪಡಲಾಗಿದೆ.