ಬೆಂಗಳೂರು: ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ವಿಶೇಷ ಅಭಿಯಾನ ನಡೆಸಲಾಗುವುದು. ಒತ್ತುವರಿ ತೆರವು ಮಾಡಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳ್ಳಂದೂರು ಸಮೀಪದ ಎಸ್.ಬಿ.ಆರ್. ಕನ್ವೆನ್ಷನ್ ಹಾಲ್ ನಲ್ಲಿ ಮಾತನಾಡಿದ ಸಿಎಂ, ಒತ್ತುವರಿ ಮಾಡಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರಾಜಕಾಲುವೆ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ. ಕಂಪನಿ ನಿರ್ಮಿಸಿದ್ದಾರೆ. ಬಫರ್ ಜೋನ್ ಒತ್ತುವರಿ ಮಾಡಿದ್ದಾರೆ. ಇದರ ಬಗ್ಗೆ ಉತ್ತರಿಸಲು ಯಾರಿದ್ದಾರೆ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇದನ್ನೆಲ್ಲ ಏನು ಮಾಡಬೇಕೆಂದು ಗೊತ್ತಿದೆ. ಅದನ್ನು ಮಾಡುತ್ತೇವೆ. ಕೆಆರ್ ಪುರಂ ನೀರು ಯಲಹಂಕ ಕಡೆಗೆ ಹರಿಯುತ್ತದೆ. ಇದನ್ನೆಲ್ಲ ಮಾಡುವಾಗ ಕಣ್ಣು ಮುಚ್ಚಿದ್ದರೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣ ಇಂಜಿನಿಯರ್ ಗಳೇ. ಎಲ್ಲದಕ್ಕೂ ಇತಿಮಿತಿ ಇದೆ. ಪ್ರತಿ ಬಾರಿಯೂ ಸಮಸ್ಯೆ ಬಂದಾಗ ಮಾತ್ರ ಮಾತನಾಡುತ್ತೀರಿ. ನೀವೇ ಆಕ್ರಮ ಮಾಡಿಸುತ್ತೀರಿ, ಮತ್ತೆ ಬಂದು ನೀವೇ ಸಮಸ್ಯೆ ಹೇಳುತ್ತೀರಿ ಎಂದು ಬೆಳ್ಳಂದೂರು ಬಳಿಯ ಎಸ್.ಬಿ.ಆರ್. ಕನ್ವೆನ್ಷನ್ ಹಾಲ್ ನಲ್ಲಿ ಸಿಎಂ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದ ಪದೇಪದೇ ಅವಾಂತರವಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಭ್ರಷ್ಟಾಚಾರದಿಂದ ಈ ರೀತಿ ಆಗುತ್ತಿದೆ. ಈ ಹಿಂದೆ ಕಳಪೆ ಕಾಮಗಾರಿ ಮಾಡಿದ್ದಕ್ಕೆ ನೀರು ನುಗ್ಗುತ್ತಿದೆ. 10 -15 ವರ್ಷದ ಹಿಂದೆಯೇ ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಮಾಡಲಾಗಿದೆ. ಯಾರ ಕುಮ್ಮಕ್ಕಿನಿಂದ ಬಿಲ್ಡರ್ ಗಳಿಗೆ ಲೈಸೆನ್ಸ್ ಕೊಡಲಾಗಿದೆ. ಲೈಸನ್ಸ್ ನೀಡುವ ಮೊದಲು ನಿಮಗೆ ಗೊತ್ತಿಲ್ಲವಾ? ಪ್ಲಾನ್ ನೋಡಲು ಆಗಿಲ್ವಾ? ಈಗ ಬಂದು ಕತೆ ಹೇಳುತ್ತೀರಿ. ಎನ್.ಜಿ.ಟಿ. ನಿಯಮ ಯಾರಾದರೂ ಪಾಲನೆ ಮಾಡಿದ್ದಾರ? ಬೆಂಗಳೂರು ನಗರ ಯೋಜನಾ ಬದ್ಧವಾಗಿ ನಡೆದಿಲ್ಲ ಎಂದು ಹೇಳಿದ್ದಾರೆ.