ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಮುರುಘಾಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿತ್ರದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್ ನಾಳೆಗೆ ಮುಂದೂಡಿದೆ. ಇದರ ಬೆನ್ನಲ್ಲೇ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಒಂದೆಡೆ ಮುರುಘಾಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಸಂತ್ರಸ್ತ ಬಾಲಕಿಯರ ಪರ ವಕೀಲ ಶ್ರೀನಿವಾಸ್, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿ 6 ದಿನಗಳಾದರೂ ಶ್ರೀಗಳನ್ನು ಈವರೆಗೆ ಬಂಧಿಸದೇ ವಿಳಂಬ ಮಾಡಲಾಗುತ್ತಿದೆ. ಇಂತಹ ಗಭೀರ ಪ್ರಕರಣ ಕೇಳಿಬಂದಿರುವುದರಿಂದ ಶ್ರೀಗಳ ಜಾಮೀನಿಗೆ ಅವಕಾಶ ಕೊಡಬಾರದು. ಈ ನಿಟ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದ್ದು, ಕೋರ್ಟ್ ಅರ್ಜಿ ಸ್ವೀಕರಿಸಿದೆ ಎಂದು ನೊಂದ ಬಾಲಕಿಯರ ಪರ ವಕೀಲರು ತಿಳಿಸಿದ್ದಾರೆ.
ಮತ್ತೊಂದೆಡೆ ಮುರುಘಾಶ್ರೀಗಳ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ (NCPCR) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಅಲ್ಲದೇ ದೂರಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 9 ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದುಬಂದಿದೆ.