ಬೆಂಗಳೂರು: ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳು ಜಲಾವೃತಗೊಂಡಿವೆ. 2015-16ರಲ್ಲಿ ಮೋಸ್ಟ್ ಡೈನಾಮಿಕ್ ಸಿಟಿ ಆಗಿದ್ದ ಬೆಂಗಳೂರು ಈಗ ಮುಳುಗುತ್ತಿರುವ ನಗರವಾಗಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಇಂದು ಡ್ರಗ್ಸ್ ಕ್ಯಾಪಿಟಲ್, ಪಾಟಹೋಲ್ ಕ್ಯಾಪಿಟಲ್ ಆಗುತ್ತಿದೆ. ಐಟಿ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಗಿದ್ದ ಬೆಂಗಳೂರು ಮಾನ್ಯತೆ ಪ್ರಪಂಚದಲ್ಲಿ ಈಗ ಮುಳುಗುತ್ತಿದೆ. ದಿನಬೆಳಗಾದರೆ ಆ ಮೈದಾನ ಈ ಮೈದಾನ ಅಂತ ಟೆನ್ಶನ್ ಕ್ಯಾಪಿಟಲ್ ಆಗಿದೆ. ಬೆಂಗಳೂರಿಗೆ ಆಡಳಿತ ವ್ಯವಸ್ಥೆಯೇ ಇಲ್ಲ, ಉಸ್ತುವಾರಿ ಸಚಿವರೇ ಇಲ್ಲ. ಬೆಂಗಳೂರಿಗೆ ಉಸ್ತುವಾರಿ ಸಚಿವರು ಯಾರು? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ಆಂತರಿಕ ಕಿತ್ತಾಟದಿಂದಾಗಿ ಬೆಂಗಳೂರಿಗೆ ಈವರೆಗೆ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಬಿಜೆಪಿಯವರಿಗೆ ದುಡ್ಡು ಹುಟ್ಟಿಸುವುದಕ್ಕಾಗಿ ಅಧಿಕಾರಿಗಳನ್ನು ತಂದು ಕೂರಿಸಿದ್ದಾರೆ. ದುರಾಡಳಿತ ಕುಣಿದಾಡುತ್ತಿದೆ. 40% ಕಮಿಷನ್ ದಂಧೆಯೇ ಈ ಸ್ಥಿತಿಗೆ ಕಾರಣ. 50% ಲಂಚ ಪಡೆದ ಮೇಲೆ ಯಾವ ಕಾಲುವೆ, ಯಾವ ರಸ್ತೆ ಸರಿಯಾಗಿ ಇರುತ್ತೆ? ಶೇ.50ರಷ್ಟು ದುಡ್ಡು ತಿಂದ ಮೇಲೆ ಉಳಿದ ದುಡ್ಡಲ್ಲಿ ಏನು ಕೆಲಸ ಮಾಡಲು ಸಾಧ್ಯ? ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ಕೊಡುತ್ತಾರಲ್ಲ ಈಗ ಅವರಿಗೆ ಬೆಂಗಳೂರಿನ ನರಕ ದರ್ಶನವಾಗುತ್ತಿದೆ. ಒಂದೊಂದು ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಲೂಟಿ ಹೊಡೆಯುತ್ತಿದ್ದಾರೆ ಅಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.