
ಪೋರ್ಚುಗಲ್‌ನಲ್ಲಿ ಆಸ್ಪತ್ರೆಗಳ ಅವ್ಯವಸ್ಥೆಗೆ ಆರೋಗ್ಯ ಸಚಿವರ ತಲೆದಂಡವಾಗಿದೆ. 34 ವರ್ಷದ ಭಾರತೀಯ ಮೂಲದ ಗರ್ಭಿಣಿಯನ್ನು ಹಾಸಿಗೆಯ ಅಲಭ್ಯತೆಯಿಂದಾಗಿ ಲಿಸ್ಬನ್‌ನಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ವರ್ಗಾಯಿಸುವಾಗ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.
ಪ್ರವಾಸಕ್ಕೆ ಬಂದಿದ್ದ ಭಾರತೀಯ ಮಹಿಳೆಯ ಸಾವಿಗೆ ಪೋರ್ಚುಗಲ್‌ನ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿರುವುದೇ ಕಾರಣ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ತುರ್ತು ಆರೈಕೆ ಸೇವೆಗಳ ಅಲಭ್ಯತೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಅಸಾಮರ್ಥ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದವು.
ಈ ಹಿನ್ನೆಲೆಯಲ್ಲಿ ಸಚಿವೆ ಪದತ್ಯಾಗ ಮಾಡಿದ್ದಾರೆ. ರಾಜೀನಾಮೆ ಬೆನ್ನಲ್ಲೇ ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಟ್ವೀಟ್ ಮಾಡಿದ್ದಾರೆ. ಟೆಮಿಡೋ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅವರು ಮಾಡಿದ ಪ್ರಯತ್ನಗಳಿಗೆ ಕೃತಜ್ಞರಾಗಿರಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸುಧಾರಣೆಗಳನ್ನು ಮುಂದುವರಿಸುವುದಾಗಿ ಕೋಸ್ಟಾ ಭರವಸೆ ನೀಡಿದ್ದಾರೆ. ಭಾರತೀಯ ಮಹಿಳೆ 31 ವಾರಗಳ ಗರ್ಭಿಣಿಯಾಗಿದ್ದರು. ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.
ಕೂಡಲೇ ಅವರನ್ನು ದೇಶದ ಅತಿದೊಡ್ಡ ಆಸ್ಪತ್ರೆ ಎನಿಸಿಕೊಂಡಿರೋ ಸಾಂತಾ ಮಾರಿಯಾಗೆ ಕರೆದೊಯ್ಯಲಾಯಿತು. ಆದ್ರೆ ನವಜಾತ ಶಿಶುಗಳ ವಿಭಾಗವು ಅಲ್ಲಿ ಫುಲ್ ಆಗಿತ್ತು. ನಂತರ ಆಕೆಯನ್ನು ಸಾವೊ ಫ್ರಾನ್ಸಿಸ್ಕೊ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಮಾರ್ಗಮಧ್ಯೆ ಆಕೆಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಕ್ಸೇವಿಯರ್ ಆಸ್ಪತ್ರೆಯಲ್ಲಿ ಮಹಿಳೆಗೆ ಸಿಸೇರಿಯನ್ ಮಾಡಿ ನವಜಾತ ಶಿಶುವನ್ನು ಆರೈಕೆ ಘಟಕಕ್ಕೆ ದಾಖಲಿಸಲಾಯಿತು. ಆದರೆ ಮಹಿಳೆ ಸಾವನ್ನಪ್ಪಿದ್ದಾರೆ.