
ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಮತ್ತವನ ಸಹಚರ ಛೋಟಾ ಶಕೀಲ್ ಬಗ್ಗೆ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ಸಂಸ್ಥೆ ಎನ್‌ಐಎ ಪ್ರಕಟಿಸಿದೆ. ದಾವೂದ್ ಇಬ್ರಾಹಿಂ ಬಗ್ಗೆ ಸುಳಿವು ನೀಡಿದ್ರೆ 25 ಲಕ್ಷ ಹಾಗೂ ಛೋಟಾ ಶಕೀಲ್ ಬಗ್ಗೆ ಮಾಹಿತಿ ನೀಡಿದ್ರೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಅಷ್ಟೇ ಅಲ್ಲ ಡಿ ಕಂಪನಿ ಸದಸ್ಯರಾದ ಟೈಗರ್ ಮೆಮೊನ್, ಅನೀಸ್ ಇಬ್ರಾಹಿಂ ಮತ್ತು ಜಾವೇದ್ ಚಿಕ್ನಾ ಬಗ್ಗೆ ಸುಳಿವು ಕೊಟ್ಟರೆ 15 ಲಕ್ಷ ರೂಪಾಯಿ ಕೊಡುವುದಾಗಿ ಪ್ರಕಟಿಸಿದೆ. ಬಹಳಷ್ಟು ಭಯೋತ್ಪಾದಕ ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಮತ್ತವನ ಸಹಚರರು ಭಾರತಕ್ಕೆ ಬೇಕಾಗಿದ್ದಾರೆ.
ಅಷ್ಟೇ ಅಲ್ಲ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ನಕಲಿ ಕರೆನ್ಸಿ ನೋಟುಗಳು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಭಾರತದಲ್ಲಿ ವಿಶೇಷ ಘಟಕವನ್ನು ಸ್ಥಾಪಿಸುತ್ತಿದ್ದಾನೆ. ಜಾಗತಿಕ ಭಯೋತ್ಪಾದಕ ಘಟಕ ಎನಿಸಿಕೊಂಡಿರೋ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜೊತೆ ಸೇರಿ ಭಾರತದಲ್ಲಿ ಉಗ್ರ ದಾಳಿಗಳನ್ನು ನಡೆಸಲು ದಾವೂದ್‌ನ ಡಿ ಕಂಪನಿ ಪ್ಲಾನ್ ಮಾಡಿರುವ ಬಗ್ಗೆ ಸಹ ಮಾಹಿತಿ ಸಿಕ್ಕಿದೆ.
ಭಾರತದ ವಿವಿಧ ನಗರಗಳು, ರಾಜಕೀಯ ನಾಯಕರು, ಉದ್ಯಮಿಗಳನ್ನು ಸಹ ಡಿ ಕಂಪನಿ ಟಾರ್ಗೆಟ್ ಮಾಡಿದೆ. ಡಿ ಗ್ಯಾಂಗ್‌ನ ವಿಶೇಷ ಘಟಕವು ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಉದ್ಯಮಿಗಳ ಮೇಲೆ ಉದ್ದೇಶಿತ ದಾಳಿಗಳನ್ನು ನಡೆಸಲು ಮತ್ತು ಭಾರತದ ಪ್ರಮುಖ ನಗರಗಳ ಮೇಲೆ ಅಟ್ಯಾಕ್ ಮಾಡಲು ಜೈಶ್ ಇ ಮೊಹಮ್ಮದ್ (ಜೆಎಂ), ಅಲ್ ಖೈದಾ ಮತ್ತು ಲಷ್ಕರ್ ಇ ತೊಯ್ಬಾದ ಸ್ಲೀಪರ್ ಸೆಲ್‌ಗಳಿಗೆ ಬೆಂಬಲ ನೀಡಲು ಸ್ಕೆಚ್ ಹಾಕಿಕೊಂಡಿದೆ.
ಹಾಗಾಗಿ ಡಿ ಕಂಪನಿಯನ್ನು ಸೆದೆಬಡಿಯಲು ಎನ್‌ಐಎ ಪ್ರಯತ್ನಿಸ್ತಾ ಇದೆ. ಈ ವರ್ಷದ ಆರಂಭದಲ್ಲಿ ಸಹ ದಾವೂದ್ ಇಬ್ರಾಹಿಂನನ್ನು ಸೆರೆ ಹಿಡಿಯಲು ಎನ್‌ಐಎ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಎಲೆಕ್ಟ್ರಾನಿಕ್ ಸಾಧನಗಳು, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ ದಾಖಲೆಗಳು, ನಗದು ಮತ್ತು ಬಂದೂಕು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದ್ದು, ಆತನಿಗೆ ಐಎಸ್‌ಐ ಬೆಂಬಲ ನೀಡುತ್ತಿದೆ