ಕಲಬುರ್ಗಿ: ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿ ಹೋದ ಯುವಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
20 ವರ್ಷದ ಯುವಕ ಸಿದ್ದಪ್ಪ ಕೊಂಡಾ ಮೃತ ಯುವಕ. 10-15 ಯುವಕರ ಗುಂಪು ಗೌರಿ-ಗಣೇಶ ಹಬ್ಬವನ್ನು ಮರೆತು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಜೂಜಾಟದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ ಯುವಕರು ಎದ್ದುಬಿದ್ದು ಓಡಿದ್ದಾರೆ. ಈ ವೇಳೆ ಓರ್ವ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಲಬುರ್ಗಿ-ಯಾದಗಿರಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.