ರಾಯಚೂರು: ಪತ್ರಕರ್ತರೆಂದು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ 6 ನಕಲಿ ಪತ್ರಕರ್ತರನ್ನು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಜು ಬಿ, ನಾಗರಾಜ ಸಿ, ಪ್ರದೀಪ್ ಗೌಡ, ಅರ್ಪಿತ, ಮಹಾದೇವಿ, ಮೇಘ ಸೇರಿದಂತೆ ಮೂವರು ಯುವಕರು ಹಾಗೂ ಮೂವರು ಯುವತಿಯರು ಬಂಧಿತ ಆರೋಪಿಗಳು.
ಯೂಟ್ಯೂಬ್ ಚಾನಲ್ ಹೆಸರಲ್ಲಿ ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದರು. ಮುದಗಲ್ ನ ಅಕ್ಕಿ ವ್ಯಾಪಾರಿಯೊಬ್ಬರ ಅಂಗಡಿಗೆ ನುಗ್ಗಿದ್ದ ಆರೋಪಿಗಳು ಅವರಿಗೆ ಬೆದರಿಕೆ ಹಾಕಿ 5 ಲಕ್ಷ ಹಣ ನೀಡಬೇಕು ಇಲ್ಲವಾದರೆ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಹೇಳಿ ಇಲ್ಲಸಲ್ಲದ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಮುದಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಪ್ರಕರಣ ಸಂಬಂಧ 6 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಕ್ಯಾಮರಾ, ಮಾರುತಿ ಸ್ವಿಫ್ಟ್ ಕಾರ್, ಐಡಿ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ.