ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಗೌರಿ – ಗಣೇಶ ಹಬ್ಬದಾಚರಣೆಗೆ ಅಡಚಣೆಯನ್ನುಂಟು ಮಾಡಿದೆ. ಕಳೆದ ಎರಡು ವರ್ಷಗಳಿಂದ ಕೊರೊನ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಮತ್ತೆ ಆರಂಭವಾಗಿದ್ದು, ಆದರೆ ಕೆಲವೆಡೆ ಸುರಿಯುತ್ತಿರುವ ನಿರಂತರ ಮಳೆ ಉತ್ಸಾಹಕ್ಕೆ ಅಡ್ಡಿಪಡಿಸುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಸ್ಥಳೀಯಾಡಳಿತಕ್ಕೆ ಶಪಿಸುತ್ತಲೇ ಜನತೆ ನೀರನ್ನು ಹೊರ ಹಾಕುತ್ತಿರುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಭಾಗಗಳಲ್ಲಿ ಹಬ್ಬದ ಸಂಭ್ರಮ ಕೊಂಚ ಮಸುಕಾಗಿದೆ.
ಇದರ ಮಧ್ಯೆ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸೂಳೆಕೆರೆ ಈಗಾಗಲೇ ತುಂಬಿದ್ದು, ಈಗ ಮತ್ತೆ ಕೋಡಿ ಬಿದ್ದಿದೆ. ಇದರಿಂದಾಗಿ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಂತಾಗಿದೆ. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.