2021 ರಲ್ಲಿ ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿತ್ತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಸಾವು – ನೋವುಗಳಾಗಿದ್ದು, ಬಹುತೇಕ ಜನರು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಇದೇ ಸಂದರ್ಭದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಮಾಹಿತಿಯೂ ಈಗ ಬಹಿರಂಗವಾಗಿದೆ.
2021 ರಲ್ಲಿ ದೇಶದಲ್ಲಿ ಒಟ್ಟು 1,64,033 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಪೈಕಿ 37,751 ಮಂದಿ ದಿನಗೂಲಿ ನೌಕರರು, 18,803 ಸ್ವಯಂ ಉದ್ಯೋಗಿಗಳು, 11,724 ಮಂದಿ ನಿರುದ್ಯೋಗಿಗಳು ಇದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ತಿಳಿಸಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಪೈಕಿ 45,026 ಮಂದಿ ಮಹಿಳೆಯರಿದ್ದು, ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಗೃಹಿಣಿಯರಿದ್ದಾರೆ. ಮಹಿಳೆಯರ ಆತ್ಮಹತ್ಯೆ ಪ್ರಕರಣದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ದ್ವಿತೀಯ ಹಾಗೂ ಮಹಾರಾಷ್ಟ್ರ ತೃತೀಯ ಸ್ಥಾನದಲ್ಲಿದೆ.