ಗಣೇಶ ಚತುರ್ಥಿಯನ್ನು ಭಾರತದಲ್ಲಿ ಒಂದು ಉತ್ಸವದಂತೆ ಆಚರಿಸಲಾಗುತ್ತದೆ. ವಿಘ್ನ ವಿನಾಶಕ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ. ಸುಖ-ಶಾಂತಿ, ಸಮೃದ್ಧಿ ಜೀವನಕ್ಕೆ ಗಣೇಶನ ಧ್ಯಾನ ಮಾಡ್ತಾರೆ ಭಕ್ತರು. ಕೇಳಿದ್ದೆಲ್ಲವನ್ನು ಗಜಮುಖ ನೀಡ್ತಾನೆ ಎಂಬ ನಂಬಿಕೆ ಭಕ್ತರದ್ದು.
ಗಣೇಶನ ಕಿವಿಯಲ್ಲಿ ಜ್ಞಾನ, ಸೊಂಡಿಲಿನಲ್ಲಿ ಧರ್ಮ, ಬಲಗೈನಲ್ಲಿ ದಾನ, ಎಡಗೈನಲ್ಲಿ ಆಹಾರ, ಹೊಟ್ಟೆಯಲ್ಲಿ ಸುಖ-ಸಮೃದ್ಧಿ, ಕಣ್ಣಿನಲ್ಲಿ ಗುರಿ, ಹೊಕ್ಕಳಿನಲ್ಲಿ ಬ್ರಹ್ಮಾಂಡ, ಕಾಲಿನಲ್ಲಿ ಸಪ್ತಲೋಕ, ತಲೆಯಲ್ಲಿ ನಂಬಿಕೆ, ಬುದ್ಧಿವಂತಿಕೆ ಅಡಗಿದೆ. ಶುದ್ಧ ತನು-ಮನದಿಂದ ಗಣೇಶನ ದರ್ಶನ ಪಡೆದ್ರೆ ವಿದ್ಯೆ, ಧನ, ಸಂಪತ್ತು, ಆರೋಗ್ಯ ಸೇರಿದಂತೆ ಎಲ್ಲವೂ ಲಭಿಸಲಿದೆ.
ಗಣೇಶ ಚೌತಿಯಂದು 10ಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳ ದರ್ಶನ ಪಡೆದ್ರೆ ಶುಭ ಎನ್ನುತ್ತಾರೆ ಹಿರಿಯರು. ಹಾಗಾಗಿ ಗಣೇಶನ ದರ್ಶನಕ್ಕೆ ಭಕ್ತರು ದೇವಸ್ಥಾನಗಳಿಗೆ ಹೋಗ್ತಾರೆ. ಗಣೇಶನ ದರ್ಶನ ಮಾಡುವ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನವಿಡಬೇಕಾಗುತ್ತದೆ.
ಗಣೇಶ ಮೂರ್ತಿಯ ಮುಂಭಾಗವನ್ನು ದರ್ಶನ ಮಾಡಬೇಕು. ಗಣೇಶ ಮೂರ್ತಿಯ ಹಿಂಭಾಗವನ್ನು ಎಂದೂ ದರ್ಶನ ಮಾಡಬಾರದು. ಹಿಂಭಾಗದಲ್ಲಿ ದರಿದ್ರ ನೆಲೆಸಿರುತ್ತದೆ. ಹಿಂಭಾಗ ನೋಡಿದ ಭಕ್ತರಿಗೆ ದರಿದ್ರ ಆವರಿಸುತ್ತದೆ ಎಂಬ ನಂಬಿಕೆಯಿದೆ.