ಬಡ ಕುಟುಂಬಗಳಿಗೆ ಪಡಿತರ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಲಿದೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಈ ಆತಂಕದ ಮಧ್ಯೆ ಇದೀಗ ಶುಭ ಸುದ್ದಿಯೊಂದು ಇಲ್ಲಿದೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ನಿಲ್ಲುವುದಿಲ್ಲ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಇದ್ದಂತೆಯೇ ನಮ್ಮ ಸರ್ಕಾರವೂ ಕೂಡ 10 ಕೆಜಿ ಪಡಿತರ ಅಕ್ಕಿ ವಿತರಿಸುತ್ತಿದೆ ಎಂದು ಹೇಳಿದರು.
ಅಕ್ಕಿ ಜೊತೆಗೆ ಜೋಳ ಹಾಗೂ ರಾಗಿಯನ್ನು ಸಹ ನೀಡಲಾಗುತ್ತಿದ್ದು, ಅನ್ನಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರ ಕೈಬಿಡುವ ಪ್ರಶ್ನೆಯೇ ಇಲ್ಲ. ಅದನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.