ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿರೋ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಗಣಿತ ಶಿಕ್ಷಕರು ಮತ್ತು ಶಾಲೆಯ ಕ್ಲರ್ಕ್‌ಗೆ ವಿದ್ಯಾರ್ಥಿಗಳೇ ಥಳಿಸಿದ್ದಾರೆ. 9ನೇ ತರಗತಿಯ ಪ್ರಾಕ್ಟಿಕಲ್ ಎಕ್ಸಾಮ್‌ನಲ್ಲಿ ಕಡಿಮೆ ಅಂಕ ನೀಡಿದ್ದಾರೆಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು ಇಬ್ಬರನ್ನೂ ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ.
ಗೋಪಿಕಂದಾರ್ ಪೊಲೀಸ್ ಠಾಣೆಯಲ್ಲಿರುವ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸೇರಿದ ಸರ್ಕಾರಿ ರೆಸಿಡೆನ್ಷಿಯಲ್ ಸ್ಕೂಲ್ ಇದು. ಶನಿವಾರ ಜಾರ್ಖಂಡ್‌ನ ಅಕಾಡೆಮಿಕ್ ಕೌನ್ಸಿಲ್ ಫಲಿತಾಂಶ ಪ್ರಕಟಿಸಿತ್ತು. 9ನೇ ತರಗತಿಯ 32 ವಿದ್ಯಾರ್ಥಿಗಳ ಪೈಕಿ 11 ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶಿಕ್ಷಕ ಸುಮನ್ ಕುಮಾರ್ ಮತ್ತು ಕ್ಲರ್ಕ್ ಸೋನೆರಾಮ್ ಚೌರೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳಿದ್ದು ಬಹುತೇಕ ಎಲ್ಲರೂ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ.
ಶಿಕ್ಷಕ ಸುಮನ್ ಕಡಿಮೆ ಅಂಕ ಕೊಟ್ಟಿದ್ದಾರೆ, ಕ್ಲರ್ಕ್ ಸೋನೆರಾಮ್ ಅದನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದರಿಂದಲೇ ತಾವೆಲ್ಲ ಫೇಲಾಗಿದ್ದೇವೆ ಅಂತಾ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಪೊಲೀಸರೇ ಸೂಚನೆ ನೀಡಿದ್ರೂ ಶಾಲಾ ಆಡಳಿತ ಮಂಡಳಿ ಅಧಿಕೃತವಾಗಿ ದೂರು ನೀಡಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ತೊಂದರೆಯಾಗುತ್ತದೆಯೆಂದು ಹೇಳಿದೆ.
ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾಗಿರುವ ಶಿಕ್ಷಕ ಮೊದಲು ಮುಖ್ಯೋಪಾಧ್ಯಾಯರಾಗಿದ್ದರು. ಆದ್ರೆ ಶಿಕ್ಷಕರ ನಡುವಣ ಜಟಾಪಟಿ ಬಳಿಕ ಅವರನ್ನು ಹೆಡ್ ಮಾಸ್ಟರ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಶಿಕ್ಷಕರಿಗೇ ಥಳಿಸಿದ ಹಿನ್ನೆಲೆಯಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು 2 ದಿನ ಸಸ್ಪೆಂಡ್ ಮಾಡಿ ಮನೆಗೆ ಕಳಿಸಲಾಗಿದೆ.